ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ (ಡಿಎಂಸಿ) ನಗರಸಭೆ ಚುನಾವಣೆಯಲ್ಲೂ ಭರ್ಜರಿ ಗೆಲುವು ಸಾಧಿಸಿದೆ. ರಾಜ್ಯದಲ್ಲಿ ನಡೆದ 108 ನಗರಸಭೆಗಳ ಪೈಕಿ 102 ನಗರಸಭೆಗಳಲ್ಲಿ ದೀದಿ ಖ್ಯಾತಿಯ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಜಯಭೇರಿ ಬಾರಿಸಿದೆ. ಪ್ರತಿಪಕ್ಷದಲ್ಲಿರುವ ಬಿಜೆಪಿ ಒಂದೇ ಒಂದು ನಗರಸಭೆಯನ್ನೂ ಗೆಲ್ಲದೇ ಭಾರಿ ಮುಖಭಂಗ ಅನುಭವಿಸಿದೆ.
108 ನಗರಸಭೆಗಳಿಗೆ ಫೆ.27ರಂದು ಮತದಾನವಾಗಿತ್ತು. ಬುಧವಾರ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಇದರಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಾರುಪತ್ಯ ಮೆರೆದಿದೆ. 102 ಕಡೆಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವೇ ಗೆಲುವು ಸಾಧಿಸಿದ್ದರೆ, ನೋಯ್ಡಾದಲ್ಲಿ ಒಂದು ಕಡೆ ಎಡ ಪಕ್ಷ ಮತ್ತು ಡಾರ್ಜಿಲಿಂಗ್ನಲ್ಲಿ ಹೊಸ ಹಾಮ್ರೊ ಪಕ್ಷ ಗೆದ್ದಿದೆ. ಇನ್ನು ಉಳಿದ ಕಡೆಗಳಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಂದಿಲ್ಲ.
ಇದನ್ನೂ ಓದಿ: ಜಿ.ಪಂ. ಚುನಾವಣೆ: 851 ರಲ್ಲಿ 766 ಕ್ಷೇತ್ರ ಗೆದ್ದು ಬೀಗಿದ ಪಟ್ನಾಯಕ್ ಪಡೆ.. ಬಿಜೆಪಿಗೆ ದೊಡ್ಡ ಮುಖಭಂಗ
ಅಚ್ಚರಿ ಎಂದರೆ 31 ನಗರಸಭೆಗಳಲ್ಲಿ ಒಂದೇ ಒಂದು ವಾರ್ಡನ್ನೂ ಬೇರೆ ಪಕ್ಷಗಳಿಗೆ ಟಿಎಂಸಿ ಬಿಟ್ಟುಕೊಟ್ಟಿಲ್ಲ. 108 ನಗರಸಭೆಗಳಲ್ಲೂ ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನೂ ಪಡೆದಿಲ್ಲ. ಹೊಸ ಹಾಮ್ರೊ ಪಕ್ಷವು ಡಾರ್ಜಿಲಿಂಗ್ ನಗರಸಭೆಯ 32 ವಾರ್ಡ್ಗಳ ಪೈಕಿ 18 ಕಡೆ ಗೆಲುವು ಸಾಧಿಸಿ ಗಮನ ಸೆಳೆದಿದೆ.