ಕೊರಾಪುಟ್(ಒಡಿಶಾ): ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಕೊರಾಪುಟ್ ಜಿಲ್ಲೆಯ ಕುಂದುರಾ ಬ್ಲಾಕ್ನ ಬುಡಕಟ್ಟು ರೈತ ಮಹಿಳೆ ರೈಮತಿ ಘಿಯುರಿಯಾ ದೆಹಲಿಗೆ ತೆರಳಿದ್ದಾರೆ. ಜಿ20 ಶೃಂಗಸಭೆಯಲ್ಲಿ ಅವರು ಕೊರಾಪುಟ್ ಪ್ರದೇಶದಲ್ಲಿ ಬೆಳೆಯುವ ವಿವಿಧ ರೀತಿಯ ಸಿರಿ ಧಾನ್ಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.
ನುವಾಗುಡ ಗ್ರಾಮದ ರೈಮತಿ ಅವರು ಅನೇಕ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಶ್ರೀಮತಿ ರೈಮತಿ ಅವರು ರೈತ ಮಹಿಳೆಯಾಗಿ ಮತ್ತು ಸಾವಯವ ಕೃಷಿಗೆ ಒತ್ತು ನೀಡುವ ತರಬೇತುದಾರರಾಗಿ ಹೆಸರುವಾಸಿಯಾಗಿದ್ದಾರೆ. ಕುಟುಂಬ ಸದಸ್ಯರ ಸಹಾಯದಿಂದ ಅವರು ತಮ್ಮ ಭೂಮಿಯಲ್ಲಿ ವಿವಿಧ ರೀತಿಯ ಅಕ್ಕಿ, ರಾಗಿ, ಭತ್ತ ಸೇರಿ ಸಿರಿ ಧಾನ್ಯಗಳ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಅವರು ಸ್ಥಳೀಯ ಆನುವಂಶಿಕ ತಳಿಗಳ ಸಂರಕ್ಷಣೆಯ ಬಗ್ಗೆ ಇತರ ಕೃಷಿ ಕುಟುಂಬಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಅವರು 72 ಸಾಂಪ್ರದಾಯಿಕ ತಳಿಯ ಅಕ್ಕಿ ಮತ್ತು 30 ಬಗೆಯ ಸಿರಿಧಾನ್ಯಗಳನ್ನು ಸಂರಕ್ಷಿಸಿದ್ದಾರೆ.
ಅವರು ತಮ್ಮ ಗ್ರಾಮದಲ್ಲಿ ಸ್ಥಾಪಿಸಲಾದ ಎಫ್ಪಿಒ (ಬಾಮಂಡೈ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪನಿ ಲಿಮಿಟೆಡ್) ನ ಮುಖ್ಯಸ್ಥರಾಗಿದ್ದಾರೆ. ಈ ಮೂಲಕ ಅವರು, ಜೈವಿಕ ಗೊಬ್ಬರಗಳು ಮತ್ತು ಜೈವಿಕ ಕೀಟನಾಶಕಗಳ ತಯಾರಿಕೆ ಮತ್ತು ಮಾರಾಟ, ಸಂಗ್ರಹಣೆ, ಸಿರಿಧಾನ್ಯಗಳ ಮಾರುಕಟ್ಟೆ ಮತ್ತು ಇತರ ಉತ್ಪನ್ನಗಳ ಸಂಬಂಧ ವ್ಯವಹಾರ ನಡೆಸುತ್ತಾರೆ. ರೈಮತಿ ಅವರ ಕುಟುಂಬ ದಾನ ನೀಡಿದ ಭೂಮಿಯಲ್ಲಿ ಕೃಷಿ ಶಾಲೆಯನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು 2012 ರಿಂದ ಕೃಷಿ ಶಾಲೆಯ ಜವಾಬ್ದಾರಿಯನ್ನು ಇವರ ಕುಟುಂಬವೇ ವಹಿಸಿಕೊಂಡಿದೆ.
ನಾಯಕತ್ವ ಮತ್ತು ಬಹು ಕೌಶಲ್ಯದ ಚಟುವಟಿಕೆಗಳಿಂದಾಗಿ ಅವರಿಗೆ ಅನೇಕ ಪ್ರಶಸ್ತಿಗಳು ಮತ್ತು ಮನ್ನಣೆಗಳನ್ನು ನೀಡಿ ಗೌರವಿಸಲಾಗಿದೆ. ರೈಮತಿ ಘಿಯುರಿಯಾ ನವದೆಹಲಿಯ ಪಿಪಿವಿ ಮತ್ತು ಎಫ್ಆರ್ ಪ್ರಾಧಿಕಾರದಿಂದ 2012 ರಲ್ಲಿ ಜಿನೋಮ್ ಸೇವರ್ ಕಮ್ಯುನಿಟಿ ಪ್ರಶಸ್ತಿಯನ್ನು ಪಡೆದ ತಂಡದ ಸದಸ್ಯರಾಗಿದ್ದರು ಎಂದು ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ನ ಪ್ರಭಾರ ನಿರ್ದೇಶಕ ಪ್ರಶಾಂತ್ ಪಗೋಡಾ ಹೇಳಿದ್ದಾರೆ.
ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ರೈಮತಿ ಅವರು ಕೊರಾಪುಟ್ ಪ್ರದೇಶದಲ್ಲಿ ಬಳಸುವ ಸಾಂಪ್ರದಾಯಿಕ ಜ್ಞಾನ ತಂತ್ರಗಳು ಮತ್ತು ಉತ್ತಮ ಗುಣಮಟ್ಟದ ಸಾಂಪ್ರದಾಯಿಕ ಸಿರಿ ಧಾನ್ಯಗಳಾದ ಬಾಟಿ ಮಂಡಿಯಾ ಮತ್ತು ಮಾಮಿ ಮಂಡಿಯಾ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಸಾವಯವ ಸಿರಿಧಾನ್ಯಗಳ ಕೃಷಿ ಮತ್ತು ಬೀಜ ಉಳಿತಾಯ ಕ್ಷೇತ್ರದಲ್ಲಿ ಪ್ರಮುಖ ಸಂಶೋಧನಾ ಕೇಂದ್ರವಾದ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ ರೈಮತಿ ಅವರಿಗೆ ಬೆಂಬಲ ನೀಡಿದೆ ಎಂದು ಪ್ರಶಾಂತ್ ಕುಮಾರ್ ಪರಿದಾ ಹೇಳಿದರು.
ಈ ಬಗ್ಗೆ ಕೃಷಿ ಅಧಿಕಾರಿ ತಪಸ್ ಚಂದ್ರ ರೈ ಮಾತನಾಡಿ, ವಿಶ್ವವೇ ಸಿರಿಧಾನ್ಯ ಪ್ರಾಮುಖ್ಯತೆ ನೀಡುತ್ತಿರುವ ಸಂದರ್ಭದಲ್ಲಿ ಕೊರಾಪುಟ್‌ನ ರಾಗಿಯನ್ನು ರೈಮತಿ ಅವರ ಮೂಲಕ ವಿಶ್ವ ನಾಯಕರಿಗೆ ಪರಿಚಯಿಸಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಪದ್ಮಶ್ರೀ ಕಮಲಾ ಪೂಜಾರಿ ಅವರು ಸಾಂಪ್ರದಾಯಿಕ ಅಕ್ಕಿ ಸಂರಕ್ಷಣೆ ಕ್ಷೇತ್ರದಲ್ಲಿ ಅಸಾಧಾರಣ ಕೆಲಸ ಮಾಡುವ ಮೂಲಕ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕೊರಾಪುಟ್ ಪ್ರದೇಶದಲ್ಲಿ ಬೆಳೆಯುವ ನೂರಾರು ರೀತಿಯ ಭತ್ತದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಕೊರಾ ಪುಟ್ ಜಿಲ್ಲೆಗೆ ಕೀರ್ತಿ ತಂದಿದ್ದರು. ಈಗ ರೈಮತಿ ಕೂಡ ತನ್ನ ಹೊಲದಲ್ಲಿ ಸಾಂಪ್ರದಾಯಿಕ ಅಕ್ಕಿ ಮತ್ತು ರಾಗಿಯನ್ನು ಸಂರಕ್ಷಿಸುವ ಮೂಲಕ ಕೊರಾಪುಟ್ ಹೆಸರನನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ ಎಂದರು.
ಇದನ್ನೂ ಓದಿ: G20 Summit: ಬ್ರಿಟನ್ ಪ್ರಧಾನಿಯಾಗಿ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ ರಿಷಿ ಸುನಕ್