ಮುಂಬೈ (ಮಹಾರಾಷ್ಟ್ರ): ಮಂಗಳಮುಖಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಮೂಲದ ಜೋನಾ (37) ಸಾವಿಗೆ ಶರಣಾದ ಮಂಗಳಮುಖಿ ಎಂದು ಗುರುತಿಸಲಾಗಿದೆ. ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳದಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದೆ.
ಕೋಲ್ಕತ್ತಾ ನಿವಾಸಿಯಾಗಿದ್ದ ಜೋನಾ, 2018ರಲ್ಲಿ ಕೆಲಸದ ನಿಮಿತ್ತ ಮುಂಬೈಗೆ ಬಂದಿದ್ದರು. ಇಲ್ಲಿನ ಗೋರೆಗಾಂವ್ ಉಪ ನಗರದಲ್ಲಿರುವ ಯಶವಂತನಗರದ ರಿದ್ಧಿ ಸಿದ್ಧಿ ಹೈಟ್ಸ್ ಅಪಾರ್ಟ್ಮೆಂಟ್ನ 14ನೇ ಮಹಡಿಯಲ್ಲಿ ಸ್ನೇಹಿತೆಯೊಂದಿಗೆ ಜೋನಾ ವಾಸವಾಗಿದ್ದರು. ಆದರೆ, ಇಂದು ಬೆಳಗ್ಗೆ ಸ್ನೇಹಿತೆ ಸಲೂನ್ಗೆ ಹೋಗಿದ್ದಾಗ ಮನೆಯಲ್ಲೇ ಜೋನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಲೂನ್ನಿಂದ ಮನೆಗೆ ಸ್ನೇಹಿತೆ ವಾಪಸ್ ಆದ ಬಳಿಕ ಜೋನಾ ಸಾವಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸ್ನೇಹಿತೆ ಸ್ಥಳೀಯರ ನೆರವಿನೊಂದಿಗೆ ಗೋರೆಗಾಂವ್‌ನ ಎಂಜಿ ರಸ್ತೆಯಲ್ಲಿರುವ ಕಪಾಡಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಘಟನೆ ಕುರಿತು ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ನಂತರ ಜೋನ್ನಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮಹಿಳೆಯಾಗಿ ಬದಲಾಗಿದ್ದ ಜೋನಾ: ಮತ್ತೊಂದೆಡೆ, ಜೋನಾ ವಾಸವಾಗಿದ್ದ ಮತ್ತು ಆತ್ಮಹತ್ಯೆ ಮಾಡಿಕೊಂಡ ಮನೆಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಾವಿಗೆ ಮುನ್ನ ಬರೆದಿಟ್ಟ ಡೆತ್ ನೋಟ್ ಪತ್ತೆಯಾಗಿದೆ. 37 ವರ್ಷದ ಜೋನಾ ಕೆಲ ಮೂಲತಃ ಪುರುಷನಾಗಿ ಜನಿಸಿದ್ದರು. ಆದರೆ, ಕೆಲವು ವರ್ಷಗಳ ಹಿಂದೆ ತಾನು ಲಿಂಗ ಪರಿವರ್ತನೆಗೆ ಒಳಗಾಗಿ ಹುಡುಗಿಯಾಗಿ ರೂಪಾಂತರಗೊಂಡಿದ್ದರು. ಆದರೆ, ತನ್ನನ್ನು ಯಾರೂ ಕೂಡ ಮಗಳಾಗಿ ಸ್ವೀಕರಿಸಲಿಲ್ಲ ಎಂದು ಡೆತ್ ನೋಟ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದರಿಂದ ಮಾನಸಿಕ ನೊಂದು ಜೋನಾ ತುಂಬಾ ಖಿನ್ನಳಾಗಿದ್ದರು. ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮತ್ತೊಂದೆಡೆ, ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ನೇಹಿತರ ವಿಚಾರಣೆಯನ್ನೂ ನಡೆಸಿದ್ದಾರೆ. ಅಲ್ಲದೇ, ಆತ್ಮಹತ್ಯೆಯ ಬಗ್ಗೆ ಬೇರೆ ಯಾರ ಮೇಲೂ ಸದ್ಯಕ್ಕೆ ಅನುಮಾನ ಕೂಡ ವ್ಯಕ್ತವಾಗಿಲ್ಲ. ಹೀಗಾಗಿ ಪೊಲೀಸರು ಸಾವಿನ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಜೋನಾ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕೋಲ್ಕತ್ತಾದಲ್ಲಿ ನೆಲೆಸಿರುವ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳ ಪ್ರಾಯೋಗಿಕ ಸರ್ವೇಗೆ ಸಿದ್ಧತೆ
ಕರ್ನಾಟಕದಲ್ಲಿ ತೃತೀಯ ಲಿಂಗಿಗಳ ಸಮೀಕ್ಷೆ: ಮತ್ತೊಂದೆಡೆ, ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳ ಪ್ರಾಯೋಗಿಕ ಸಮೀಕ್ಷೆ ನಡೆಸಲು ಯೋಜಿಸಲಾಗಿದೆ. ಆರಂಭದಲ್ಲಿ ಮೈಸೂರು ಮತ್ತು ವಿಜಯಪುರದಲ್ಲಿ ಈ ಸಮೀಕ್ಷೆ ನಡೆಸಲಿದೆ. ಈ ಬಗ್ಗೆ ಒಂದೆರೆಡು ದಿನಗಳಲ್ಲಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದು ಮೈಸೂರಿನ ತೃತೀಯ ಲಿಂಗಿ ಸವೆನ್ ರೈನ್ ಬೋ ಸಂಘದ ಅಧ್ಯಕ್ಷೆ ಪ್ರಣತಿ ಪ್ರಕಾಶ್ ತಿಳಿಸಿದ್ದಾರೆ.