ಬಿಲಾಸ್ಪುರ್ (ಛತ್ತೀಸ್‌ಗಡ): ಲಿಂಗ ಗುರುತಿಸುವಿಕೆಗೆ (Gender identity) ಸಂಬಂಧಿಸಿದಂತೆ ನಿಂದಿಸಿ, ಕಿರುಕುಳ ಕೊಟ್ಟಿದ್ದಕ್ಕೆ ತೃತೀಯ ಲಿಂಗಿಯೊಬ್ಬರು (Transgender) ತನ್ನ ತಂದೆಯ ವಿರುದ್ಧವೇ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸರಕಂಡ ಠಾಣಾ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಸಂತ್ರಸ್ತರ ತಂದೆ ಅವರ ಲಿಂಗ ಗುರುತಿಸುವಿಕೆಗೆ ಸಂಬಂಧಿಸಿದಂತೆ ನಿರಂತರವಾಗಿ ನಿಂದಿಸುತ್ತಿದ್ದರು. ಇದರಿಂದಾಗಿ ಅವರು ತುಂಬಾ ನೊಂದಿದ್ದರು. ತಂದೆಯ ಚಿತ್ರಹಿಂಸೆ ಮಿತಿ ಮೀರಿದಾಗ ಅವರು ಮನೆ ಬಿಟ್ಟು ಪ್ರತ್ಯೇಕವಾಗಿ ವಾಸಿಸಲು ಶುರು ಮಾಡಿದರು. ಆದರೂ, ಅವರ ತಂದೆ ಮನೆ ಬಳಿ ಬಂದು ಕೆಟ್ಟದ್ದಾಗಿ ನಿಂದಿಸುತ್ತಿದ್ದರಂತೆ ಎಂದು ಮಾಹಿತಿ ನೀಡಿದ್ದಾರೆ.
ತನ್ನ ತಂದೆಯ ನಡತೆಗೆ ಬೇಸತ್ತ ಅವರು, ದೂರು ದಾಖಲಿಸಿ ಆರೋಪಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಆರೋಪಿ ಜಾಮೀನು ಪಡೆದು ಹೊರಗೆ ಬಂದಿದ್ದಾರೆ.
ಇದನ್ನೂ ಓದಿ: ಶ್ರೀಕೃಷ್ಣ ಜ್ಯುವೆಲರಿ ಅಂಗಡಿ-ಕಚೇರಿಗಳ ಮೇಲೆ ED ದಾಳಿ
ಇದನ್ನೂ ಮುನ್ನ, ಟ್ರಾನ್ಸ್‌ಜೆಂಡರ್(ತೃತೀಯ ಲಿಂಗಿ) ತನ್ನ ತಂದೆಯ ವಿರುದ್ಧ ಇದೇ ವಿಚಾರಕ್ಕೆ ದೂರು ನೀಡಿದ್ದಳು. ಆದರೆ, ಪೋಲಿಸರು ಅವರ ತಂದೆಗೆ ಬುದ್ಧಿ ಹೇಳಿ ಕಳುಹಿಸಿದ್ದರು ಎನ್ನಲಾಗಿದೆ.