ಸಂಬಲ್‌ಪುರ(ಒಡಿಶಾ): ಜಿಲ್ಲೆಯಲ್ಲಿ ಮೆಮು (MEMU) ಪ್ಯಾಸೆಂಜರ್ ರೈಲು ಕೋಣಕ್ಕೆ ಗುದ್ದಿ ಹಳಿತಪ್ಪಿದೆ. ಬುಧವಾರ ಸಂಜೆ ರೈಲು ಝಾರ್ಸುಗುಡದಿಂದ ಸಂಬಲ್ಪುರಕ್ಕೆ ತೆರಳುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿತು.
ಸಂಬಲ್‌ಪುರ ಡಿಆರ್‌ಎಂ ವಿನೀತ್ ಕುಮಾರ್ ಮಾತನಾಡಿ, "ಝಾರ್ಸುಗುಡದಿಂದ ಸಂಬಲ್‌ಪುರಕ್ಕೆ ತೆರಳುತ್ತಿದ್ದ ಮೆಮು ಪ್ಯಾಸೆಂಜರ್ ರೈಲು ಹಳಿತಪ್ಪಿದೆ. ಚಲಿಸುತ್ತಿರುವ ರೈಲಿನ ಮಧ್ಯೆ ಕೋಣ ನುಗ್ಗಿದ್ದು, ಕೋಚ್ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದೆ. ಮೂರನೇ ಬೋಗಿ ಹಳಿ ತಪ್ಪಿ ಅಪಘಾತ ಸಂಭವಿಸಿದ್ದು, ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ತನಿಖೆ ಕೈಗೊಳ್ಳಲಾಗಿದೆ. ಹಳಿ ದುರಸ್ತಿ ಕಾರ್ಯ ನಡೆದ ಬಳಿಕ ರೈಲು ಗಮ್ಯಸ್ಥಾನ ತಲುಪಿತು" ಎಂದರು. ಸಂಜೆ 6.25ರ ಸುಮಾರಿಗೆ ಸರಳಾ-ಸಂಬಲ್‌ಪುರ ವಿಭಾಗದ ರೈಲ್ವೆ ಹಳಿಯಲ್ಲಿ ಕೋಣ ಹಠಾತ್ ನುಗ್ಗಿದೆ. ಜಾರ್ಸುಗುಡ-ಸಂಬಲ್‌ಪುರ ವಿಶೇಷ ರೈಲು ಕೋಚ್‌ನ ನಾಲ್ಕು ಚಕ್ರಗಳು ಹಳಿತಪ್ಪಿದ್ದವು ಎಂದು ಇಲಾಖೆ ಪ್ರಕಟನೆ ಹೊರಡಿಸಿದೆ.
ಈ ವರ್ಷ ಹಲವೆಡೆ ರೈಲು ಅಪಘಾತಗಳು ಸಂಭವಿಸಿವೆ. ಒಡಿಶಾ ರೈಲು ಅಪಘಾತ, ಆಂಧ್ರಪ್ರದೇಶ ವಿಶಾಖಪಟ್ಟಣ ರೈಲು ಅಪಘಾತ ನಡೆದಿತ್ತು. ಜೂನ್ 2ರಂದು ಒಡಿಶಾದಲ್ಲಿ ನಡೆದ ಅಪಘಾತದಲ್ಲಿ 290ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ಅಕ್ಟೋಬರ್ 29ರಂದು ಆಂಧ್ರಪ್ರದೇಶದಲ್ಲಿ ಮತ್ತೊಂದು ಭೀಕರ ರೈಲು ಅವಘಡ ಸಂಭವಿಸಿ, 13 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ: ದೀಪಾವಳಿ: ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ವಿಶೇಷ ರೈಲು