ಚೆನ್ನೈ (ತಮಿಳುನಾಡು): ನೆರೆ ರಾಜ್ಯ ತಮಿಳುನಾಡಿನ ಚೆನ್ನೈನಲ್ಲಿ ಉಪನಗರ ಎಲೆಕ್ಟ್ರಿಲ್ ರೈಲು ಹಳಿ ತಪ್ಪಿದ ಘಟನೆ ಇಂದು ಬೆಳಗ್ಗೆ ನಡೆದಿದೆ. ಇದರಿಂದ ಪ್ರಯಾಣಿಕರು ತೀವ್ರ ಭಯದಲ್ಲೇ ರೈಲಿನಿಂದ ಕೆಳಗಡೆ ಇಳಿದು ಓಡಿಬಂದಿದ್ದಾರೆ. ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.
ರಾಜಧಾನಿ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಇಂದು ಬೆಳಗ್ಗೆ 9.30ರ ಸುಮಾರಿಗೆ ತಿರುವಳ್ಳೂರಿಗೆ ಉಪನಗರ ಎಲೆಕ್ಟ್ರಿಲ್ ರೈಲು ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ಈ ರೈಲು ಚೆನ್ನೈ ಬೇಸಿನ್ ಬ್ರಿಡ್ಜ್ ಮೇಲ್ಸೇತುವೆ ದಾಟುತ್ತಿದ್ದಾಗ ಏಕಾಏಕಿ ಭಾರಿ ಶಬ್ದ ಕೇಳಿಸಿದ್ದು, ರೈಲಿನ ಕೊನೆಯ ಬೋಗಿ ಹಳಿತಪ್ಪಿದೆ. ತಕ್ಷಣವೇ ರೈಲನ್ನು ನಿಲ್ಲಿಸಲಾಗಿದೆ. ಅಷ್ಟರಲ್ಲಿ ಪ್ರಯಾಣಿಕರು ಕಿರುಚಾಡುತ್ತಾ ರೈಲಿನಿಂದ ಹೊರಗೆ ಬಂದಿದ್ದಾರೆ.
ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಂದು ದುರಂತ: ಗೂಡ್ಸ್ ರೈಲು ಹರಿದು 6 ಕಾರ್ಮಿಕರು ಸಾವು
ಈ ಘಟನೆ ಬಗ್ಗೆ ಮಾಹಿತಿ ಪಡೆದ ರೈಲ್ವೆ ಅಧಿಕಾರಿಗಳು, ನೌಕರರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ರೈಲ್ವೆ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಿಂದ ರೈಲು ಸಂಚಾರದಲ್ಲಿ ಕೆಲ ಗಂಟೆಗಳ ಕಾಲ ವ್ಯತ್ಯಯ ಉಂಟಾಗಿತ್ತು. ಇದರಿಂದ ಹಲವಾರು ಪ್ರಯಾಣಿಕರು ರೈಲಿನಿಂದ ಇಳಿದು ಹತ್ತಿರದ ಬಸ್ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಮುಂದಿನ ಪ್ರಯಾಣ ಬೆಳೆಸಿದರು. ಆದರೆ, ಈ ಅಪಘಾತದಲ್ಲಿ ಯಾವುದೇ ಪ್ರಯಾಣಿಕರಿಗೂ ಹಾನಿಯಾಗಿಲ್ಲ. ಸದ್ಯ ಈ ಘಟನೆ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ಉಪನಗರ ಎಲೆಕ್ಟ್ರಿಲ್ ರೈಲು ಹಳಿತಪ್ಪಿದ ನಂತರ ಚೆನ್ನೈ ಸೆಂಟ್ರಲ್ ಸ್ಟೇಷನ್‌ನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಟ್ರ್ಯಾಕ್ ಮತ್ತು ಕೋಚ್‌ನ ಮರುಸ್ಥಾಪನೆಯಲ್ಲಿ ತೊಡಗಿದ್ದಾರೆ. ತಿರುವಳ್ಳೂರ್ ಮತ್ತು ಅವಡಿ ಮಾರ್ಗದಿಂದ ರೈಲು ಸೇವೆಗಳನ್ನು ಒಂದೆರಡು ಗಂಟೆಗಳ ಕಾಲ ನಿಲ್ಲಿಸಲಾಯಿತು. ಪೆರಂಬೂರ್ ಮತ್ತು ವಿಲ್ಲಿಕ್ವಾಕ್ಕಂ ನಿಲ್ದಾಣಗಳಲ್ಲಿ ಕೆಲವು ರೈಲುಗಳನ್ನು ಸ್ಥಗಿತ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ವಾರದಲ್ಲಿ ಮೂರನೇ ಘಟನೆ: ತಮಿಳುನಾಡಿನ ಒಂದು ವಾರದ ಅವಧಿಯಲ್ಲಿ ರೈಲು ಹಳಿ ತಪ್ಪಿದ ಮೂರನೇ ಪ್ರಕರಣ ಇದಾಗಿದೆ. ಜೂನ್ 8ರಂದು ಮೆಟ್ಟುಪಾಳ್ಯಂನಿಂದ ಕೊನೂರ್‌ಗೆ ತೆರಳುತ್ತಿದ್ದ ನೀಲಗಿರಿ ಮೌಂಟೇನ್ ರೈಲಿನ ನಾಲ್ಕನೇ ಕೋಚ್ ಹಳಿತಪ್ಪಿತ್ತು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳು ಆಗಿರಲಿಲ್ಲ. ಮತ್ತೊಂದೆಡೆ, ಜೂನ್ 9ರಂದು ಬೇಸಿನ್ ಬ್ರಿಡ್ಜ್ ಬಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಖಾಲಿ ಕೋಚ್ ಹಳಿತಪ್ಪಿತ್ತು.
ಆಂಧ್ರಪ್ರದೇಶದ ವಿಜಯವಾಡ ರೈಲು ನಿಲ್ದಾಣದಿಂದ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಜನಶತಾಬ್ದಿ ರೈಲು ಪ್ರಯಾಣಿಕರೊಂದಿಗೆ ಆಗಮಿಸಿತ್ತು. ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿದ್ದ ರೈಲು ಬೇಸಿನ್ ಬ್ರಿಡ್ಜ್ ವರ್ಕ್‌ಶಾಪ್‌ಗೆ ತೆರಳುತ್ತಿತ್ತು. ಈ ವೇಳೆ ರೈಲಿನ ಎರಡು ಚಕ್ರಗಳು ಹಳಿಯಿಂದ ಕೆಳಗಿಳಿದ್ದವು. ಇದಾದ ಬಳಿಕ ಸುಮಾರು ಎರಡು ಗಂಟೆಗಳ ಕಾಲ ದುರಸ್ತಿ ಕಾರ್ಯ ಕೈಗೊಂಡು ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಮತ್ತೊಂದೆಡೆ, ಜೂನ್ 2ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದ ತ್ರಿವಳಿ ರೈಲು ಅಪಘಾತದಲ್ಲಿ ಸುಮಾರು 280 ಮೃತಪಟ್ಟಿದ್ದು, ಒಂದು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ: Goods train incident: ಒಡಿಶಾದ ಬಾಲಾಸೋರ್ನಲ್ಲಿ ಮತ್ತೊಂದು ಗೂಡ್ಸ್ ರೈಲಿಗೆ ಬೆಂಕಿ: ವಿಡಿಯೋ