ಕನ್ಯಾಕುಮಾರಿ( ತಮಿಳುನಾಡು) : ವಾರಾಂತ್ಯ ಹಿನ್ನೆಲೆ ಪ್ರವಾಸಕ್ಕಾಗಿ ಕನ್ಯಾಕುಮಾರಿಗೆ ಆಗಮಿಸಿದ್ದ ಬೆಂಗಳೂರಿನ ಪ್ರವಾಸಿಗರಲ್ಲಿ ಮೂವರು ಸಮುದ್ರಪಾಲಾಗಿ, ಇಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಮೃತರನ್ನು ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಗಳಾದ ಮಣಿ (30), ಸುರೇಶ್(30) ಎಂದು ಗುರುತಿಸಲಾಗಿದೆ. ನೀರು ಪಾಲಾಗಿದ್ದ ಬಿಂದು ಅವರನ್ನು ಭದ್ರತಾ ಪಡೆಗಳ ಸಿಬ್ಬಂದಿ ರಕ್ಷಣೆ ಮಾಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರಿದಿದೆ.
ಸೆಪ್ಟೆಂಬರ್ 2ರಂದು ಬೆಂಗಳೂರಿನಿಂದ 10 ಜನ ಪ್ರವಾಸಿಗರು ಕನ್ಯಾಕುಮಾರಿಗೆ ಬಂದಿದ್ದರು. ಈ ಎಲ್ಲರೂ ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಗಳಾಗಿದ್ದಾರೆ. ಶನಿವಾರ ಕನ್ಯಾಕುಮಾರಿಯಲ್ಲಿನ ಹೋಟೆಲ್ ಒಂದರಲ್ಲಿ ಎಲ್ಲರೂ ತಂಗಿದ್ದರು. ಬಳಿಕ ಭಾನುವಾರ ಇಲ್ಲಿನ ಕೋವಲಂ ಬೀಚ್ನ್ನು ನೋಡಲು ಬಂದಿದ್ದಾರೆ. ನಂತರ ಎಲ್ಲರೂ ಸಮುದ್ರಕ್ಕೆ ಇಳಿದು ಎಂಜಾಯ್ ಮಾಡುತ್ತಿದ್ದರು. ಈ ಸಂದರ್ಭ ಗುಂಪಿನಲ್ಲಿದ್ದ ಮಣಿ, ಸುರೇಶ್, ಬಿಂದು ಆಳ ಜಾಸ್ತಿ ಇರುವ ಕಡೆಗೆ ತೆರಳಿದ್ದಾರೆ. ಈ ವೇಳೆ ಬೃಹತ್ ಅಲೆಗಳಿಗೆ ಸಿಲುಕಿ ಮೂವರು ಕೊಚ್ಚಿಹೋಗಿದ್ದಾರೆ.
ಈ ವೇಳೆ ಜೊತೆಗಿದ್ದವರು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವವರನ್ನು ರಕ್ಷಣೆ ಮಾಡುವಂತೆ ಬೊಬ್ಬೆ ಹಾಕಿದ್ದಾರೆ. ಈ ಸಂದರ್ಭ ತಕ್ಷಣ ಎಚ್ಚೆತ್ತ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಪ್ರವಾಸಿಗರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅದಾಗಲೇ ಸುರೇಶ್ ಮತ್ತು ಮಣಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಬಿಂದು ಅವರನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿ ಕೂಡಲೇ ಕನ್ಯಾಕುಮಾರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಕನ್ಯಾಕುಮಾರಿ ಪೊಲೀಸರು, ಇನ್ಸ್ಪೆಕ್ಟರ್ ನವೀನ್ ನೇತೃತ್ವದಲ್ಲಿ ಪ್ರವಾಸಿಗರ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ದುರದೃಷ್ಟವಶಾತ್ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದು, ಒಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ನದಿಯಲ್ಲಿ ಈಜಲು ಹೋಗಿದ್ದ ಐವರು ಸಾವು : ಗಂಡಕ್ ನದಿಯಲ್ಲಿ ಈಜಲು ಹೋಗಿ ಐವರು ಹುಡುಗರು ನೀರು ಪಾಲಾಗಿದ್ದ ಘಟನೆ ಇತ್ತೀಚೆಗೆ ಬಿಹಾರದಲ್ಲಿ ನಡೆದಿತ್ತು. ಇಲ್ಲಿನ ಸಾಹೇಬ್‌ಪುರ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ವಿಷ್ಣುಪುರ ಅಹೋಕ್ ಎಂಬಲ್ಲಿ ಘಟನೆ ನಡೆದಿತ್ತು. ಒಟ್ಟು 9 ಮಂದಿ ಹುಡುಗರು ಈಜಲು ತೆರಳಿದ್ದರು. ಈ ಪೈಕಿ ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಇದನ್ನೂ ಓದಿ : Rain alert: ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ.. ಈ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ