ಹೈದರಾಬಾದ್ : ತೆಲಂಗಾಣ ಸರ್ಕಾರದ ಕೊಕಾಪೇಟೆಯ ಭೂಮಿ ಹರಾಜು ಪ್ರಕ್ರಿಯೆ ವಿರುದ್ಧ ಗಂಭೀರ ಆರೋಪ ಮಾಡಿದ್ದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ)ಅಧ್ಯಕ್ಷ, ಸಂಸದ ಎ.ರೇವಂತ ರೆಡ್ಡಿ ಅವರನ್ನು ಸೋಮವಾರ ಗೃಹಬಂಧನದಲ್ಲಿರಿಸಲಾಗಿದೆ.
ತೆಲಂಗಾಣ ಸರ್ಕಾರ ಕೊಕಪೇಟದಲ್ಲಿ ಕಳೆದ ವಾರ ಹರಾಜು ಹಾಕಿದ ಸರ್ಕಾರಿ ಜಮೀನುಗಳು ಕೆ ಚಂದ್ರಶೇಖರ್ ರಾವ್ ಸರ್ಕಾರದ "ದೊಡ್ಡ ಹಗರಣ" ಎಂದು ರೆಡ್ಡಿ ಆರೋಪಿಸಿದ್ದರು. ಕೋಕಪೇಟೆ ಜಮೀನುಗಳ ಇ-ಹರಾಜಿನಲ್ಲಿ ಅಕ್ರಮ ನಡೆದಿದ್ದು, ಸಿಎಂ ಕೆಸಿಆರ್‌ಗೆ ಹತ್ತಿರವಿರುವ ಕಂಪನಿಗಳು ಮಾತ್ರ ಭೂಮಿಯನ್ನು ಪಡೆದುಕೊಂಡಿವೆ ಎಂದು ಕಾಂಗ್ರೆಸ್‌ನ ಲೋಕಸಭಾ ಸದಸ್ಯ ರೇವಂತ್ ರೆಡ್ಡಿ ಆರೋಪಿಸಿದ್ದರು.
ಈ ಅಕ್ರಮವನ್ನು ವಿರೋಧಿಸಿ ತೆಲಂಗಾಣದ ಕಾಂಗ್ರೆಸ್ ಘಟಕವು ಕೋಕಪೇಟೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಲು ಮುಂದಾಗಿತ್ತು. ಇನ್ನು, ಮುಂಗಾರು ಅಧಿವೇಶನಕ್ಕೆ ಹಾಜರಾಗಲು ಸಂಸದ ರೇವಂತ್ ರಾಜಧಾನಿ ದೆಹಲಿಗೆ ಹೊರಟಿದ್ದಾಗ, ಅವರನ್ನು ಸೋಮವಾರ ಮುಂಜಾನೆ ಹೈದರಾಬಾದ್ ಪೊಲೀಸರು ತಡೆದು ಗೃಹಬಂಧನದಲ್ಲಿರಿಸಿದ್ದಾರೆ.
ರೆಡ್ಡಿ ಕೊಕಪೇಟೆಗೆ ಭೇಟಿ ನೀಡಲು ಯೋಜಿಸುತ್ತಿದ್ದರು. ಹೀಗಾಗಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಅವರು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೆಡ್ಡಿ ಜೊತೆಗೆ ಅಖಿಲ ಭಾರತ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಯಾದವ್ ಅವರನ್ನು ಹೈದರಾಬಾದ್ ಪೊಲೀಸರು ಗೃಹಬಂಧನದಲ್ಲಿರಿಸಿದ್ದಾರೆ.
ಇಂದಿನಿಂದ ಪ್ರಾರಂಭವಾಗುವ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಮುಖ್ಯಮಂತ್ರಿಯ ಭ್ರಷ್ಟಾಚಾರ ಮತ್ತು ಕೃಷ್ಣ ನದಿ ನೀರಿನ ವಿವಾದದ ಬಗ್ಗೆ ಪ್ರಸ್ತಾಪಿಸುವುದಾಗಿ ಹೇಳಿದ್ದರು. ಆದರೆ, ಸದ್ಯ ಪೊಲೀಸರು ಅವರನ್ನು ಗೃಹಬಂಧನದಲ್ಲಿಟ್ಟಿದ್ದಾರೆ.