ನವದೆಹಲಿ : ಕಳೆದ 24 ಗಂಟೆಗಳಲ್ಲಿ 12,408 ಕೋವಿಡ್ ಕೇಸ್ಗಳು ಪತ್ತೆಯಾಗಿವೆ. 120 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,08,02,591 ಹಾಗೂ ಮೃತರ ಸಂಖ್ಯೆ 1,54,823ಕ್ಕೆ ಏರಿಕೆಯಾಗಿದೆ.
ಆದರೆ, ಇತರ ಕೊರೊನಾ ಪೀಡಿತ ರಾಷ್ಟ್ರಗಳಿಗೆ ಹೋಲಿಸಿದ್ರೆ ಭಾರತದಲ್ಲಿ ಸಾವಿನ ಪ್ರಮಾಣ ಕಡಿಮೆಯಿದ್ದು, ಗುಣಮುಖರ ಸಂಖ್ಯೆ ಅಧಿಕವಾಗಿದೆ. 1.8 ಕೋಟಿ ಸೋಂಕಿತರ ಪೈಕಿ 1,04,96,308 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 1,51,460 ಕೇಸ್ ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
49.59 ಲಕ್ಷ ಮಂದಿಗೆ ಲಸಿಕೆ : ಜನವರಿ 16ರಿಂದ ನಿನ್ನೆಯವರೆಗೆ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರು ಸೇರಿ ಸುಮಾರು 50 ಲಕ್ಷ (49,59,445) ಮಂದಿಗೆ ಲಸಿಕೆ ನೀಡಲಾಗಿದೆ.
ಫೆಬ್ರವರಿ 4ರವರೆಗೆ 19,99,31,795 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ನಿನ್ನೆ ಒಂದೇ ದಿನ 7,15,776 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.