ನವದೆಹಲಿ: ಭಾರತೀಯ ಸೇನೆಯ ಉನ್ನತ ಕಮಾಂಡರ್‌ಗಳ ನಾಲ್ಕು ದಿನಗಳ ದ್ವೈವಾರ್ಷಿಕ ಸಮಾವೇಶ ಇಂದಿನಿಂದ ನವದೆಹಲಿಯಲ್ಲಿ ಆರಂಭವಾಗಲಿದೆ. ಸೇನೆಯ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ, ಕಾರ್ಯಾಚರಣೆ ಸಾಮರ್ಥ್ಯ ವೃದ್ಧಿಯ ಚರ್ಚೆ ಮತ್ತು ಸೇನೆಯ ಪ್ರಮುಖ ನೀತಿ ನಿರ್ಧಾರಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ.
ಸಮಾವೇಶದಲ್ಲಿ ಸೇನೆಯ ಉನ್ನತ ಅಧಿಕಾರಿಗಳು, ಸೇನಾ ಕಮಾಂಡರ್‌ಗಳು, ಸೇನಾ ಮುಖ್ಯ ಕಚೇರಿಯ ಸಿಬ್ಬಂದಿ ವಿಭಾಗದ ಮುಖ್ಯಾಧಿಕಾರಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಸೇನೆಯ ಕುರಿತು ಆಂತರಿಕ ಸಮಿತಿ ಮಾಡಿರುವ ಶಿಫಾರಸುಗಳ ಕುರಿತು ಈ ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ ಎನ್ನಲಾಗಿದೆ.
ಸಮಾವೇಶದ ಮೊದಲ ದಿನ ಮಾನವ ಸಂಪನ್ಮೂಲ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮಾವೇಶ ಉದ್ದೇಶಿಸಿ ಮಂಗಳವಾರ ಮಾತನಾಡಲಿದ್ದಾರೆ. ರಕ್ಷಣಾ ಸಚಿವರ ಭಾಷಣಕ್ಕೆ ಮುಂಚಿತವಾಗಿ ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರು(ಸಿಡಿಎಸ್)ಬಿಪಿನ್ ರಾವತ್ ಮತ್ತು ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಯ ಮುಖ್ಯಸ್ಥರು ಕಮಾಂಡರ್‌ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮೂರನೇ ದಿನ ವಿವಿಧ ಸೇನಾ ಕಮಾಂಡರ್‌ಗಳು ಯೋಜಿಸಿರುವ ವಿವಿಧ ಕಾರ್ಯಸೂಚಿಗಳ ಕುರಿತು ಚರ್ಚೆ ನಡೆಯಲಿದೆ. ಇದಾದ ನಂತರ ವಿವಿಧ ಪ್ರಧಾನ ಸಿಬ್ಬಂದಿ ಅಧಿಕಾರಿಗಳಿಂದ ವಿವಿಧ ವಿಷಯಗಳ ಬಗ್ಗೆ ಸಂಕ್ಷಿಪ್ತ ಚರ್ಚೆ ನಡೆಯಲಿದೆ ಎಂದು ಭಾರತೀಯ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ನಾಲ್ಕನೇ ಹಾಗೂ ಅಂತಿಮ ದಿನದ ಸಮಾವೇಶದಲ್ಲಿ ಗಡಿ ರಸ್ತೆಗಳ ಪ್ರಧಾನ ನಿರ್ದೇಶಕರು (ಡಿಜಿಬಿಆರ್) ಗಡಿ ರಸ್ತೆಗಳ ಸಂಘಟನೆಯ (ಬಿಆರ್‌ಒ) ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಲ್ಲದೇ ಸೇನೆಯ ವಿವಿಧ ಹಂತಗಳಲ್ಲಿ ಮಾನವ ಸಂಪನ್ಮೂಲದ ಬಳಕೆಯನ್ನು ಉತ್ತಮಗೊಳಿಸುವ ಸ್ವಯಂಚಾಲಿತ ಕ್ರಮಗಳ ಬಗ್ಗೆಯೂ ಮಾತುಕತೆ ನಡೆಸಲಿದ್ದಾರೆ. ಸೇನಾ ಮುಖ್ಯಸ್ಥರು ಸಮಾರೋಪ ಭಾಷಣ ಮಾಡಲಿದ್ದಾರೆ.
ಇದನ್ನೂ ಓದಿ: ಐಎಸ್‌ಐಗೆ ಮಾಹಿತಿ ರವಾನೆ: ಭಾರತೀಯ ಯೋಧನ ಬಂಧನ
ಅಕ್ಟೋಬರ್ 10 ರಂದು ಭಾರತ-ಚೀನಾ ಕೊನೆಯ ಸುತ್ತಿನ ಮಾತುಕತೆ ನಡೆದಿದ್ದು, ಬಿಕ್ಕಟ್ಟಿಗೆ ಯಾರು ಹೊಣೆ ಎಂಬ ವಿಚಾರವಾಗಿ ಪರಸ್ಪರ ದೂಷಿಸಿಕೊಂಡರು. ಸದ್ಯ ಎಲ್ಎಸಿ ಉದ್ದಕ್ಕೂ ಎರಡೂ ಕಡೆಯವರು ಅಂದಾಉ 50 ಸಾವಿರದಿಂದ 60 ಸಾವಿರ ಸೈನಿಕರನ್ನು ಹೊಂದಿದೆ.