ಮುಂಬೈ: ರೈತರ ಪ್ರತಿಭಟನೆಗೆ ಸಂಬಂಧಿಸಿದ “ಟೂಲ್ಕಿಟ್” ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲೆ ನಿಕಿತಾ ಜಾಕೋಬ್ ಬಾಂಬೆ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಟರ್ಜಿ ಸಲ್ಲಿಸಿದ್ದಾರೆ.
ಟೂಲ್ಕಿಟ್ ಪ್ರಕರಣದಲ್ಲಿ ಜಾಕೋಬ್ ಮತ್ತು ಇನ್ನೋರ್ವ ಆರೋಪಿ ವಿರುದ್ಧ ದೆಹಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ತುರ್ತು ವಿಚಾರಣೆ ಕೋರಿ ಜಾಕೋಬ್ ತಮ್ಮ ಮನವಿಯನ್ನು ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಜಾಕೋಬ್ 4 ವಾರಗಳವರೆಗೆ ಪ್ರಯಾಣಿಸುವ ವೇಳೆ ಬಂಧಿಸದಂತೆ ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಅಲ್ಲದೇ ಯಾವುದೇ ವಿಪರೀತ ಕ್ರಮಗಳನ್ನು ಕೈಗೊಳ್ಳಬಾರದು ಎಂಬ ಮನವಿಯನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಸಮಾವೇಶಕ್ಕೆ ಅಗತ್ಯ ಭದ್ರತೆ: ಬಸವರಾಜ್ ಬೊಮ್ಮಾಯಿ
ತನಿಖೆಯ ಹೆಸರಿನಲ್ಲಿ ಯಾವುದೇ ಅಪರಾಧ ಮಾಡದಿದ್ದರೂ ಸುಳ್ಳು ಮತ್ತು ಕ್ಷುಲ್ಲಕ ಪ್ರಕರಣದಲ್ಲಿ ಬಂಧಿಸಬಹುದೆಂಬ ಹೆದರಿಕೆಯಿಂದ ಜಾಕೋಬ್ ಈ ಅರ್ಜಿ ಸಲ್ಲಿಸಿದ್ದಾರಂತೆ. ನಿಕಿತಾ ಜಾಕೋಬ್ ತಮ್ಮನ್ನು ತಾವು ಪರಿಸರ ಕಾರ್ಯಕರ್ತೆ ಎಂದೂ ಹೇಳಿಕೊಳ್ಳುತ್ತಾರೆ.
ಈ ಮನವಿಯು ನ್ಯಾಯಮೂರ್ತಿ ಪಿ.ಡಿ.ನಾಯಕ್ ಅವರ ಏಕಪೀಠದ ಮುಂದೆ ಸಲ್ಲಿಕೆಯಾಗಿದ್ದು, ನಾಳೆ ವಿಚಾರಣೆ ನಡೆಯಲಿದೆ.