ಹೈದರಾಬಾದ್: ತೆಲುಗು ಚಲನಚಿತ್ರ ನಟ ಮನೋಜ್ ತನ್ನ ಲಿವ್ ಇನ್ ಸಂಗಾತಿಯ ಪತಿಯ ಮೇಲೆ ಗುಂಡಿನ ದಾಳಿ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ನಟ ಮನೋಜ್ ಹಾಗೂ ಪ್ರಿಯತಮೆ ಸ್ಮಿತಾದಾಸ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಮನೋಜ್ಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದ್ದು, ಚಂಚಲಗುಡ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಹೈದರಾಬಾದ್‌ನ ಹೊರವಲಯದ ಶಮೀರ್ ಪೇಟೆ ಸೆಲೆಬ್ರಿಟಿ ಕ್ಲಬ್ನಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ಜರುಗಿದೆ. 'ಶಂಭೋ ಶಿವ ಶಂಭೋ' ಮತ್ತು 'ವಿನಾಯಕುಡು' ಚಿತ್ರಗಳಲ್ಲಿ ಅಭಿನಯಿಸಿರುವ ಮನೋಜ್ ಹಾಗೂ ವಿಚ್ಛೇದಿತ ಸ್ಮಿತಾದಾಸ್ ಕಳೆದ ಮೂರು ವರ್ಷಗಳಿಂದ ಸೆಲೆಬ್ರಿಟಿ ವಿಲ್ಲಾದಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ಸ್ಮಿತಾದಾಸ್ ತನ್ನ ಮೊದಲ ಪತಿಯಿಂದ ಒಂದು ಹೆಣ್ಣು ಹಾಗೂ ಗಂಡು ಸೇರಿ ಇಬ್ಬರು ಮಕ್ಕಳನ್ನು ಪಡೆದಿದ್ದು, ಆ ಇಬ್ಬರು ಮಕ್ಕಳು ತಾಯಿ ಸ್ಮಿತಾದಾಸ್ ಜೊತೆಗೆ ವಾಸಿಸುತ್ತಿದ್ದಾರೆ.
ಶನಿವಾರ ಬೆಳಗ್ಗೆ ಸ್ಮಿತಾದಾಸ್ ವಿಚ್ಛೇದಿತ ಪತಿ ಸಿದ್ದಾರ್ಥ್ ದಾಸ್ ತನ್ನ ಮಗಳನ್ನು ಕರೆದುಕೊಂಡು ಹೋಗಲು ಸ್ಮಿತಾದಾಸ್ ಮನೆಗೆ ಬಂದಿದ್ದರು. ಆಗ ಸ್ಮಿತಾದಾಸ್ ಮನೋಜ್ಗೆ ವಿಷಯ ತಿಳಿಸಿದ್ದಾರೆ. ಏರ್ ಗನ್ ಹಿಡಿದು ಹೊರಬಂದ ಮನೋಜ್ ಸಿದ್ದಾರ್ಥ್ನನ್ನು ಸಾಯಿಸುತ್ತೇನೆ ಎಂದು ಬೆನ್ನಟ್ಟಿದ್ದಾನೆ. ಆ ವೇಳೆ ಏರ್ ಗನ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಘಟನೆ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಮನೋಜ್ ಬಳಿಯಿದ್ದ ಏರ್ ಗನ್ ವಶಪಡಿಸಿಕೊಂಡಿದ್ದಾರೆ. ಮನೋಜ್ ಮತ್ತು ಸ್ಮಿತಾದಾಸ್ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ, ಮನೋಜ್ನನ್ನು ಇಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ಕೌನ್ಸೆಲಿಂಗ್ನಲ್ಲಿ ಮೂಡಿದ ಪ್ರೀತಿ: ಮೇಡ್ಚಲ್ ಡಿಸಿಪಿ ಸಂದೀಪ್ ರಾವ್ ಪ್ರಕಾರ, ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ಸಿದ್ಧಾರ್ಥ ದಾಸ್ ಹಾಗೂ ಒಡಿಶಾದ ಬರಂಪುರದ ಸ್ಮಿತಾದಾಸ್ 20 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ 17 ವರ್ಷದ ಒಬ್ಬ ಮಗ ಮತ್ತು 13 ವರ್ಷದ ಮಗಳು ಇದ್ದಾರೆ. ಆದಾಗ್ಯೂ, 2019ರಲ್ಲಿ ಸ್ಮಿತಾದಾಸ್ ತನ್ನ ಪತಿಯೊಂದಿಗೆ ವೈಮನಸ್ಸಿನ ಕಾರಣದಿಂದ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಜೊತೆಗೆ ತನ್ನ ಇಬ್ಬರು ಮಕ್ಕಳನ್ನು ಸಹ ನೋಡಿಕೊಳ್ಳುತ್ತೇನೆ. ಆದ್ದರಿಂದ ನಾನು ವಾಸಿಸುವ ಸ್ಥಳಕ್ಕೆ ಪತಿ ಭೇಟಿ ನೀಡಬಾರದು ಎಂದು ನ್ಯಾಯಾಲಯದಿಂದ ಆದೇಶ ಪಡೆದಿದ್ದರು.
ಸ್ಮಿತಾದಾಸ್ ಒತ್ತಡ ಮತ್ತು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಲಹೆ ನೀಡುತ್ತಾರೆ. ನಟ ಮನೋಜ್ ಸಹ ಸ್ಮಿತಾದಾಸ್ ಬಳಿ ಕೌನ್ಸೆಲಿಂಗ್ ಪಡೆಯುತ್ತಿದ್ದರು. ಇದರಿಂದ ಇಬ್ಬರೂ ಆತ್ಮೀಯರಾಗಿ ಕಳೆದ ಮೂರು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ. ಆದರೆ, ಕಳೆದ ಜೂನ್ 12ರಂದು ಸ್ಮಿತಾದಾಸ್ ಮಗ ತನ್ನ ತಾಯಿಯೊಂದಿಗೆ ವಾಸಿಸುತ್ತಿರುವ ಮನೋಜ್ ತನಗೆ ಮತ್ತು ತನ್ನ ಸಹೋದರಿಗೆ ನಿರಂತರವಾಗಿ ಕಿರುಕುಳ ಮತ್ತು ಹಲ್ಲೆ ನಡೆಸುತ್ತಿದ್ದಾನೆ ಎಂದು ಆರೋಪಿಸಿ ಮೇಡ್ಚಲ್ ಮಲ್ಕಾಜಿಗಿರಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದರು.
ತಾಯಿಯ ಸಂಬಂಧಿಕರ ಬಳಿಯೂ ಇರಲು ಸಾಧ್ಯವಾಗುತ್ತಿಲ್ಲ ಎಂದು 17 ವರ್ಷದ ಬಾಲಕ ಹೇಳಿಕೊಂಡಿದ್ದ. ಇದರಿಂದ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಆತನನ್ನು ಸರ್ಕಾರಿ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ಸಿಡಬ್ಲ್ಯುಸಿ ಅಧಿಕಾರಿಗಳು ಸ್ಮಿತಾದಾಸ್ಗೆ ಜುಲೈ 18ರಂದು ತನ್ನ ಮಗಳೊಂದಿಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಇದರ ನಡುವೆ ವಿಶಾಖಪಟ್ಟಣಂನಲ್ಲಿ ನೆಲೆಸಿರುವ ತನ್ನ ತಂದೆಗೆ ಬಾಲಕ ದೂರವಾಣಿ ಮೂಲಕ ಸಂಪರ್ಕಿಸಿ ಎಲ್ಲವನ್ನೂ ವಿವರಿಸಿದ್ದಾನೆ. ಹೀಗಾಗಿ ಮಕ್ಕಳ ಬಗ್ಗೆ ತಿಳಿದುಕೊಳ್ಳಲು ಸಿದ್ದಾರ್ಥ್ ದಾಸ್ ಶನಿವಾರ ಮುಂಜಾನೆ ಹೈದರಾಬಾದ್‌ನ ಶಮೀರ್‌ಪೇಟ್‌ನಲ್ಲಿರುವ ಸ್ಮಿತಾ ಮನೆಗೆ ಬಂದಿದ್ದರು. ಈ ವೇಳೆ ರದ್ಧಾಂತ ನಡೆದಿದೆ.
ಇದನ್ನೂ ಓದಿ: ಯುವತಿಗಾಗಿ ರಸ್ತೆಯಲ್ಲೇ ಹೊಡೆದಾಡಿಕೊಂಡ ಯುವಕರು: ಓರ್ವನ ಸ್ಥಿತಿ ಗಂಭೀರ