ನವದೆಹಲಿ : ICRISATನ 50ನೇ ವಾರ್ಷಿಕೋತ್ಸವದ ಪ್ರಯುಕ್ತ ಮತ್ತು 11ನೇ ಶತಮಾನದ ಭಕ್ತಿಪಂಥದ ಸಂತ ರಾಮಾನುಜಾಚಾರ್ಯರ ಸ್ಮರಣಾರ್ಥ 216 ಅಡಿ ಎತ್ತರದ ‘ಸಮಾನತೆಯ ಪ್ರತಿಮೆ’ಯನ್ನು ಉದ್ಘಾಟಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆ ಸುಮಾರು ಹೈದರಾಬಾದ್‌ನ ಬೇಗಂಪೇಟ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಈ ಹಿನ್ನೆಲೆ ಹೈದರಾಬಾದ್‌ನಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ದಕ್ಷಿಣ ಭಾರತದ ಸಮಾಜ ಸುಧಾರಕರಲ್ಲಿ ಅತ್ಯಂತ ಪ್ರಮುಖರೆನಿಸಿದವರು ಶ್ರೀ ರಾಮಾನುಜಾಚಾರ್ಯರು. ವಿಶಿಷ್ಠಾದ್ವೈತ ಸಿದ್ಧಾಂತದ ಪ್ರತಿಪಾದಕರಾಗಿದ್ದ ಶ್ರೀಗಳು, ಭೂಮಿ ಮೇಲೆ ಅವತರಿಸಿ ಸಾವಿರ ವರ್ಷ ಪೂರ್ಣಗೊಂಡಿರುವ ನಿಮಿತ್ತ 216 ಅಡಿ ಎತ್ತರದ ಪ್ರತಿಮೆ ಹೈದರಾಬಾದ್‌ನ ಮುಚಿಂತಲ್ ಎಂಬಲ್ಲಿ ಲೋಕಾರ್ಪಣೆಗೊಳ್ಳಲು ಸಿದ್ಧವಾಗಿದ್ದು, ಇಂದು ಸಂಜೆ 7 ಗಂಟೆಗೆ ಪಿಎಂ ಮೋದಿ ಉದ್ಘಾಟಿಸಲಿದ್ದಾರೆ.
ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಹೈದರಾಬಾದ್‌ನ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಪ್ರಧಾನಿ ಅವರ ಭದ್ರತೆಗಾಗಿ ಸುಮಾರು 7,000 ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಶ್ರೀರಾಮನಗರದಲ್ಲೂ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿಯವರ ಭದ್ರತೆಯ ಹೊಣೆ ಹೊತ್ತಿರುವ ಎಸ್‌ಪಿಜಿ ಅಧಿಕಾರಿಗಳು ತೆಲಂಗಾಣ ಪೊಲೀಸರೊಂದಿಗೆ ಹೈದರಾಬಾದ್‌ನಲ್ಲಿ ಭದ್ರತಾ ಕ್ರಮಗಳನ್ನು ಪರಿಶೀಲಿಸುತ್ತಿದ್ದಾರೆ.
ಇತ್ತೀಚೆಗೆ ಪಂಜಾಬ್‌ನಲ್ಲಿ ನಡೆದ ಪ್ರಧಾನಿ ಬೆಂಗಾವಲು ವಾಹನವನ್ನು ತಡೆದ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪ್ರಧಾನಿ ನಿರ್ಗಮನದ ವೇಳೆ, ಶಂಶಾಬಾದ್ ವಿಮಾನ ನಿಲ್ದಾಣದ ಮಾರ್ಗದಲ್ಲಿ ಪೊಲೀಸರು ದಟ್ಟಣೆಯನ್ನು ನಿಯಂತ್ರಿಸುವ ಜೊತೆಗೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ತೆಲಂಗಾಣ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರು ಈಗಾಗಲೇ ಡಿಜಿಪಿ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಭದ್ರತೆ ಮತ್ತು ಸಂಚಾರ ವ್ಯವಸ್ಥೆ ಬಗ್ಗೆ ಚರ್ಚಿಸಿದ್ದಾರೆ.
ಪ್ರಧಾನಿ ಮೋದಿಯವರ ಹೈದರಾಬಾದ್ ಪರ್ಯಟನೆ ಹೀಗೆ ಸಾಗಲಿದೆ..
- ಮಧ್ಯಾಹ್ನ 2 ಗಂಟೆಗೆ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ಮೋದಿ ಆಗಮನ
- ಅಲ್ಲಿಂದ ಹೆಲಿಕಾಪ್ಟರ್ ಮೂಲಕ ICRISATಗೆ ತೆರಳಿ.. ಸುವರ್ಣ ಮಹೋತ್ಸವದಲ್ಲಿ ಭಾಗಿ
- ವಿಶೇಷ ಹೆಲಿಕಾಪ್ಟರ್ ಮೂಲಕ ಸಂಜೆ 5 ಗಂಟೆಗೆ ಮುಚ್ಚಿಂತಾಲ್‌ನಲ್ಲಿರುವ ಶ್ರೀರಾಮನಗರಕ್ಕೆ ಭೇಟಿ
- ಅಲ್ಲಿ ಅತಿಥಿ ಗೃಹದಲ್ಲಿ 10 ನಿಮಿಷಗಳ ಕಾಲ ರಿಪ್ರೇಶ್ ಆಗಿ ಯಾಗ ಶಾಲೆಗೆ ಭೇಟಿ ನೀಡುತ್ತಾರೆ
- ಸಂಜೆ 6 ಗಂಟೆಗೆ ಮೋದಿ ಯಾಗಶಾಲೆಯ ಪೆರುಮಾಳ್ ದರ್ಶನ ಮಾಡಿ ವಿಶ್ವಕ್ ಸೇನುರನ್ನು ಪೂಜಿಸುತ್ತಾರೆ
- ಸಂಜೆ 7 ಗಂಟೆಗೆ ಪ್ರಧಾನಿ ಮೋದಿ ‘ಸಮಾನತೆಯ ಪ್ರತಿಮೆ’ಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ
- ಸಮಾನತೆಯ ಪ್ರತಿಮೆ ಬಳಿ ಸುಮಾರು ಅರ್ಧ ಗಂಟೆ ಕಾಲ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ
- ಮೋದಿ ಸಮ್ಮುಖದಲ್ಲಿ ರಾಮಾನುಜಾಚಾರ್ಯರ ಪ್ರತಿಮೆಯ ಮೇಲೆ 15 ನಿಮಿಷಗಳ ಕಾಲ 3D ಲೈಟಿಂಗ್ ಪ್ರದರ್ಶನ ನಡೆಯುತ್ತದೆ
- ಬಳಿಕ .. ಮತ್ತೊಮ್ಮೆ ಯಾಗಶಾಲೆಗೆ ಆಗಮಿಸಿ ಇಂದು ನಡೆದ ಶ್ರೀಲಕ್ಷ್ಮೀನಾರಾಯಣ ಯಾಗಕ್ಕೆ ಪೂರ್ಣಾಹುತಿ ನಡೆಸುತ್ತಾರೆ
- ಈ ವೇಳೆ 5,000 ರುತ್ವಿಕರು ಪ್ರಧಾನಿ ಮೋದಿಗೆ ವೈದಿಕ (ವೇದ) ಆಶೀರ್ವಾದ ನೀಡುತ್ತಾರೆ
- ನಂತರ ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ರಸ್ತೆಯ ಮೂಲಕ ತೆರಳುತ್ತಾರೆ
- ಅಲ್ಲಿಂದ ವಿಶೇಷ ವಿಮಾನದ ಮೂಲಕ ಪ್ರಯಾಣಿಸಿ ದೆಹಲಿಗೆ ತೆರಳುತ್ತಾರೆ..