ಚೆನ್ನೈ: ಭಾರತದಲ್ಲಿ ಸದ್ಯ ಲಸಿಕೆ ಅಭಿಯಾನ ಆರಂಭಗೊಂಡಿದ್ದರೂ ಲಸಿಕೆ ಕೊರತೆ ಉಂಟಾಗಿದೆ. ಈ ನಡುವೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಲಸಿಕೆ ವಿತರಿಸುವ ಕಾರ್ಯದಲ್ಲಿ ಇಕ್ಕಟ್ಟಿಗೆ ಸಿಲುಕಿದೆ.
ಉತ್ತರ ಪ್ರದೇಶ, ದೆಹಲಿ ಮತ್ತು ತಮಿಳುನಾಡಿಗೆ ನಿಗದಿ ಮಾಡಿದ್ದಕ್ಕಿಂತಲೂ ಕಡಿಮೆ ಪ್ರಮಾಣದ ಲಸಿಕೆ ಹಂಚಿಕೆಯಾಗಿದ್ದರೆ ಇತ್ತ ರಾಜಸ್ಥಾನ್, ಗುಜರಾತ್ ಹಾಗೂ ಮಹಾರಾಷ್ಟ್ರಕ್ಕೆ ಹೆಚ್ಚಿನ ಲಸಿಕೆ ಹಂಚಿಕೆಯಾಗಿದೆ ಎಂದು ಇಂಟಿಗ್ರೇಟೆಡ್ ಸೆಕ್ಯುರಿಟೀಸ್ ಕಂಪನಿ ಎಮ್ಕೆ ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್ ಹೇಳಿದೆ.
ಎಮ್ಕೆ ಗ್ಲೋಬಲ್ ಸಂಸ್ಥೆ ಪ್ರಕಾರ, ಜನಸಂಖ್ಯೆ, ಅದರ ಸಾಂದ್ರತೆ, ನಗರ - ಗ್ರಾಮೀಣ ಅನುಪಾತ, ಸಕ್ರಿಯ ಪ್ರಕರಣಗಳು, ಸಾವಿನ ಸಂಖ್ಯೆ ಮತ್ತು ಇತರ ನಿಯತಾಂಕಗಳನ್ನು ಆಧರಿಸಿ ಸೂಕ್ತವಾದ ರಾಜ್ಯ ಪಾಲನ್ನು ಅಂದಾಜು ಮಾಡಿದೆ.
ರಾಜ್ಯಗಳ ಜನಸಂಖ್ಯೆಯ ಪ್ರಕಾರ ಅದರ ವ್ಯಾಕ್ಸಿನೇಷನ್ ಡ್ರೈವ್ ಸರಾಸರಿಯೂ ರಾಷ್ಟ್ರೀಯ ವ್ಯಾಕ್ಸಿನೇಷನ್ ಸರಾಸರಿಗೆ ಹೊಂದಿಕೆಯಾಗುವಂತೆ ಲಸಿಕೆ ವಿತರಣೆಯಾಗಬೇಕು ಎಂದು ಎಮ್ಕೆ ಗ್ಲೋಬಲ್ ತಿಳಸಿದೆ.
ಮಾಜಿ ಕೇಂದ್ರ ಆರೋಗ್ಯ ಸಚಿವ ಮತ್ತು ಸಂಸತ್ ಸದಸ್ಯ ಅನ್ಬುಮಣಿ ರಾಮದಾಸ್ ಅವರ ಪ್ರಕಾರ, 7.62 ಕೋಟಿ ಜನಸಂಖ್ಯೆ ಹೊಂದಿರುವ ತಮಿಳುನಾಡಿಗೆ 72 ಲಕ್ಷ ಲಸಿಕೆ ಹಂಚಿಕೆಯಾದರೆ, 6.94 ಕೋಟಿ ಜನಸಂಖ್ಯೆ ಹೊಂದಿರುವ ಗುಜರಾತ್‌ಗೆ 1.39 ಕೋಟಿ ಲಸಿಕೆ, 6.66 ಕೋಟಿ ಜನಸಂಖ್ಯೆ ಹೊಂದಿರುವ ಕರ್ನಾಟಕ 1.06 ಕೋಟಿ ಲಸಿಕೆ ಹಂಚಿಕೆಯಾಗಿದೆ.
ಎಮ್ಕೆ ಗ್ಲೋಬಲ್ ಅಂದಾಜಿನ ಪ್ರಕಾರ, ವ್ಯರ್ಥವಾಗದ ಸನ್ನಿವೇಶದಲ್ಲಿ ವ್ಯಾಕ್ಸಿನೇಷನ್‌ನ ಒಟ್ಟು ವೆಚ್ಚವು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡಾ 0.6 - 0.7 ರಷ್ಟಾಗುತ್ತದೆ, ಅದರಲ್ಲಿ ರಾಜ್ಯಗಳು ಜಿಡಿಪಿಯ ಶೇಕಡಾ 0.25 ಮತ್ತು ಖಾಸಗಿ ವಲಯವು 0.4 ರಷ್ಟು ಭರಿಸುತ್ತವೆ. ಇದರಲ್ಲಿ ಕೇಂದ್ರವೇ ಅತೀ ಕಡಿಮೆ ವೆಚ್ಚ ಭರಿಸಿದಂತಾಗುತ್ತದೆ ಎಂದಿದೆ.