ತಿರುನಲ್ವೇಲಿ(ತಮಿಳುನಾಡು) : ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಮುನ್ನೀರಪಳ್ಳಂ ಬಳಿ ನಡೆದ ಕ್ವಾರಿ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಮತ್ತೊಬ್ಬ ಕಾರ್ಮಿಕ ಬಂಡೆಗಳ ನಡುವೆ ಹಿಟಾಚಿ ಯಂತ್ರದೊಳಗೆ ಸಿಲುಕಿದ್ದು, ರಕ್ಷಣೆಗಾಗಿ ಮೊರೆ ಇಡುತ್ತಿದ್ದಾರೆ.
ಅಡೈಮಿತಿಪ್ಪಂಕುಳಂನಲ್ಲಿ ಶನಿವಾರ ರಾತ್ರಿ 300 ಅಡಿ ಆಳದ ಕಲ್ಲಿನ ಕ್ವಾರಿಯಲ್ಲಿ ದೈತ್ಯ ಬಂಡೆಯೊಂದು ಉರುಳಿಬಿದ್ದ ಪರಿಣಾಮ ಆರು ಕಾರ್ಮಿಕರು ಅದರಲ್ಲಿ ಸಿಲುಕಿಕೊಂಡಿದ್ದರು. ಅದರಲ್ಲಿ ನಟರ್ಕುಲಂನ ವಿಜಯ್ ಮತ್ತು ವಿಟ್ಟಿಲಪುರಂನ ಮುರುಗನ್ ಎಂಬುವರನ್ನು ರಕ್ಷಿಸಲಾಗಿದೆ.
ಲಾರಿ ಚಾಲಕ ರಾಜೇಂದ್ರನ್ ಮತ್ತು ಹಿಟಾಚಿ ಆಪರೇಟರ್‌ಗಳಾದ ಸೆಲ್ವಂ, ಮುರುಗನ್ ಎಂಬುವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇತ್ತ, ಮತ್ತೊಬ್ಬ ಲಾರಿ ಚಾಲಕ ಸೆಲ್ವಕುಮಾರ್ ಜೀವಂತವಾಗಿದ್ದು, ಬಂಡೆಗಳ ನಡುವೆ ಹಿಟಾಚಿ ಯಂತ್ರದೊಳಗೆ ಸಿಲುಕಿದ್ದಾರೆ.
ಕಳೆದ 15 ಗಂಟೆಗಳಿಂದಲೂ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸೆಲ್ವಕುಮಾರ್ ತನ್ನ ಕೈಮೇಲೆತ್ತಿ, ನನಗೆ ಸಹಾಯ ಮಾಡಿ, ನನ್ನನ್ನು ರಕ್ಷಿಸಿ ಎಂದು ಕೂಗಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತ, ರಾಷ್ಟ್ರೀಯ ವಿಪತ್ತು ರಕ್ಷಣಾ ತಂಡ ಸ್ಥಳಕ್ಕೆ ಬರುತ್ತಿದೆ. ಆದರೆ, ರಸ್ತೆ ಮಾರ್ಗವಾಗಿ ಈ ತಂಡ ಇಲ್ಲಿಗೆ ಬರಲು ಇನ್ನೂ ಹಲವು ಗಂಟೆಗಳು ಬೇಕಾಗುತ್ತದೆ. ಮೇಲಾಗಿ ಸತತವಾಗಿ ಬಂಡೆಗಳು ಕುಸಿದು ಬೀಳುತ್ತಿರುವುದರಿಂದ ರಕ್ಷಿಸುವಲ್ಲಿ ಸಮಸ್ಯೆ ಉಂಟಾಗಿದೆ. ಹೀಗಾಗಿ, ಜೀವನ್ಮರಣ ಹೋರಾಟ ನಡೆಸುತ್ತಿರುವ ಸೆಲ್ವಕುಮಾರ್ ರಕ್ಷಿಸಲು ಸಾಧ್ಯವೇ ಎಂಬ ಪ್ರಶ್ನೆಯೂ ಮೂಡಿದೆ.
ಇದನ್ನೂ ಓದಿ: ಕಾಶ್ಮೀರಿ ಪಂಡಿತ್ ನೌಕರರ ವರ್ಗಾವಣೆಗೆ ಗುಪ್ಕರ್ ಒಕ್ಕೂಟ, ಬಿಜೆಪಿ ವಿರೋಧ