ತಿರುಚಿರಪ್ಪಲ್ಲಿ (ತಮಿಳುನಾಡು): ಜಿಲ್ಲೆಯಿಂದ 1 ಕೋಟಿ ರೂಪಾಯಿ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ತಿರುಚಿರಪ್ಪಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಬ್ ಕಲೆಕ್ಟರ್ ಅವರನ್ನು ಚುನಾವಣಾ ವ್ಯಾಪ್ತಿಗೆ ಒಳಪಡದ ಹುದ್ದೆಗಳಿಗೆ ವರ್ಗಾಯಿಸಲಾಗಿದೆ.
ವಿಶೇಷ ವೀಕ್ಷಕರ ವರದಿಯನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಬರೆದ ಪತ್ರದಲ್ಲಿ ಚುನಾವಣಾ ಆಯೋಗ ತಿಳಿಸಿದೆ.
ತಿರುಚಿರಪ್ಪಲ್ಲಿ ಎಸ್ಪಿ ಪಿ.ರಾಜನ್, ಕಲೆಕ್ಟರ್ ಎಸ್.ಶಿವರಸು ಮತ್ತು ತಿರುಚಿರಪಲ್ಲಿಯ ಶ್ರೀರಂಗಂನ ಉಪ ಕಲೆಕ್ಟರ್ ನಿಶಾಂತ್ ಕೃಷ್ಣ ಅವರನ್ನು ಚುನಾವಣಾ ವ್ಯಾಪ್ತಿಗೆ ಒಳಪಡದ ಹುದ್ದೆಗಳಿಗೆ ವರ್ಗಾಯಿಸಲು ಅನುಮೋದನೆ ನೀಡಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಇದನ್ನೂ ಓದಿ: ಕೃಷಿ ಕಾನೂನುಗಳನ್ನು ವಿರೋಧಿಸಿ ಭಾರತ್ ಬಂದ್: ರಸ್ತೆ, ರೈಲು ಹಳಿ ಬಂದ್ ಮಾಡಿ ಪ್ರತಿಭಟನೆ
ಈ ಮೂವರ ಜಾಗಕ್ಕೆ ನೂತನ ಅಧಿಕಾರಿಗಳನ್ನು ನೇಮಿಸಲು ಇಸಿ ಅನುಮೋದನೆ ನೀಡಿದೆ. ರಾಜನ್ ಬದಲಿಗೆ ಎ.ಮೈಲ್ವಗಾನನ್ ಮತ್ತು ಶಿವರಸು ಸ್ಥಾನಕ್ಕೆ ಎಸ್.ದಿವ್ಯಾದರ್ಶಿನಿ ಅವರನ್ನು ನೇಮಿಸಲಾಗಿದೆ.
ತಮಿಳುನಾಡಿನ ವಿಧಾನಸಭಾ ಚುನಾವಣೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದ 234 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಕಾಂಗ್ರೆಸ್-ಡಿಎಂಕೆ ಮತ್ತು ಬಿಜೆಪಿ - ಎಐಎಡಿಎಂಕೆ ಮೈತ್ರಿ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.