ಶಿವಕಾಶಿ (ತಮಿಳುನಾಡು): ಕೋವಿಡ್ ಹಾವಳಿಯಿಂದ ಕಳೆದ ವರ್ಷಗಳಿಂದ ತೀವ್ರ ನಷ್ಟ ಅನುಭವಿಸಿದ್ದ ತಮಿಳುನಾಡಿನ ಶಿವಕಾಶಿಯ ಪಟಾಕಿ ತಯಾರಕರಿಗೆ ಈಗ ಮತ್ತೊಂದು ಸಂಕಟ ಎದುರಾಗಿದೆ. ಪಟಾಕಿಗಳಲ್ಲಿ ಬೇರಿಯಂ ನೈಟ್ರೇಟ್ ಬಳಕೆಗೆ ಸುಪ್ರೀಂಕೋರ್ಟ್ ನಿಷೇಧ ಹಾಗೂ ಅನೇಕ ರಾಜ್ಯಗಳಲ್ಲಿ ಪಟಾಕಿಗೆ ನಿರ್ಬಂಧ ಹೇರಿರುವುದಿರಂದ ಪಟಾಕಿ ತಯಾರಕರು ನಷ್ಟ ಅನುಭವಿಸುವಂತಾಗಿದೆ.
8 ಲಕ್ಷ ಜನ ಉದ್ಯೋಗಿಗಳು: ಶಿವಕಾಶಿಯು ಭಾರತದ ಪಟಾಕಿ ಉತ್ಪಾದನೆಯ ಹಬ್ ಆಗಿದ್ದು, ಸಾವಿರಕ್ಕೂ ಹೆಚ್ಚು ನೋಂದಾಯಿತ ಪಟಾಕಿ ಘಟಕಗಳಿಗೆ ನೆಲೆಯಾಗಿದೆ. ಜೊತೆಗೆ, ಇದು ಸುಮಾರು 8 ಲಕ್ಷ ಜನರಿಗೆ ಉದ್ಯೋಗಗಳನ್ನು ಒದಗಿಸುತ್ತದೆ. ಆದರೆ, ಪಟಾಕಿಗಳಿಗೆ ದೀರ್ಘಾವಧಿ ಬಾಳ್ವಿಕೆ ನೀಡುವ ಪ್ರಮುಖ ವಸ್ತುವಾದ ಬೇರಿಯಂ ನೈಟ್ರೇಟ್ ರಾಸಾಯನಿಕವನ್ನು ಬಳಸುವುದಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧದಿಂದಾಗಿ ಈ ವರ್ಷ ಉತ್ಪಾದನೆಯನ್ನೇ ಶೇ.40ಕ್ಕಿಂತ ಕಡಿಮೆ ಮಾಡಲಾಗಿದೆ.
ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸ್ಟ್ರಿಂಗ್ ಕ್ರ್ಯಾಕರ್ಸ್ ತಯಾರಿಕೆಯನ್ನು ನಿಷೇಧಿಸಿದೆ. ಸಾಮಾನ್ಯವಾಗಿ ಶಿವಕಾಶಿಯ ಹೆಚ್ಚಿನ ಕಾರ್ಖಾನೆಗಳು ಮಾರಾಟ ಮಾಡುವ ಪಟಾಕಿಗಳ ಪ್ರಮಾಣದಲ್ಲಿ ಸ್ಟ್ರಿಂಗ್ ಕ್ರ್ಯಾಕರ್ಸ್ ಕನಿಷ್ಠ ಶೇ.30ರಷ್ಟು ಇರುತ್ತದೆ. ಎರಡನೆಯದು ಬೇರಿಯಂ ನೈಟ್ರೇಟ್ ಎಂಬ ರಾಸಾಯನಿಕವನ್ನೂ ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಇದನ್ನು ಸ್ಥಿರಗೊಳಿಸುವ ಆಕ್ಸಿಡೈಸರ್ ಆಗಿ ಬಳಸಲಾಗುತ್ತದೆ ಮತ್ತು ಪಟಾಕಿಗಳಿಗೆ ದೀರ್ಘಾವಧಿಯ ಬಳಕೆ ಅವಧಿಯನ್ನು ನೀಡುತ್ತಿತ್ತು ಎಂದು ಪಟಾಕಿ ತಯಾರಿಕಾ ಮಾಲೀಕರು ಹೇಳುತ್ತಾರೆ.
ಸುಪ್ರೀಂ ಕೋರ್ಟ್‌ಗೆ ಮನವಿ: ಇದೀಗ ಪರಿಸರ ಅರಣ್ಯ ಸಚಿವಾಲಯ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯು ಪಟಾಕಿಗಳನ್ನು ತಯಾರಿಸಲು ಬಳಸುವ ಬೇರಿಯಂ ನೈಟ್ರೇಟ್ ಮೇಲಿನ ನಿಷೇಧವನ್ನು ಹಿಂತೆಗೆಯಬೇಕೆಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಆದ್ದರಿಂದ, ಪ್ರಸ್ತುತ ನಾವು ಸುಪ್ರೀಂ ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದರೆ, ಆದೇಶವು ಇನ್ನೂ ಬಾಕಿಯಿದೆ. ಸದ್ಯಕ್ಕೆ ನಾವು ಬಳಕೆ ಮಾಡುತ್ತಿರುವ ಕಚ್ಚಾ ವಸ್ತು ಮತ್ತು ರಾಸಾಯನಿಕಗಳು ಉತ್ಪಾದನಾ ಗುಣಮಟ್ಟವನ್ನು ಕುಸಿಯುವಂತೆ ಮಾಡಿದೆ. ಅಲ್ಲದೇ, ಕಳೆದ 10 ದಿನಗಳಿಂದ ಶಿವಕಾಶಿಯಲ್ಲಿ ಮಳೆ ಸುರಿಯುತ್ತಿದ್ದು, ಯಾವುದೇ ಪಟಾಕಿಗಳನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಲವತ್ತುಗೊಂಡಿದ್ದಾರೆ.
ನಿಷೇಧ ಏಕೆ ಎಂದೇ ನಮಗೆ ಗೊತ್ತಿಲ್ಲ: ಸುಪ್ರೀಂ ಕೋರ್ಟ್ ಸ್ಟ್ರಿಂಗ್ ಕ್ರ್ಯಾಕರ್ಸ್ಗಳನ್ನು ಏಕೆ ನಿಷೇಧಿಸಿದೆ ಎಂಬುವುದೇ ನಮಗೆ ತಿಳಿಯುತ್ತಿಲ್ಲ. ಆದರೆ, ಆದೇಶ ಪಾಲನೆ ಹಿನ್ನೆಲೆಯಲ್ಲಿ ನಾವು ಸ್ಟ್ರಿಂಗ್ ಕ್ರ್ಯಾಕರ್ಸ್ ಉತ್ಪಾದನೆಯನ್ನು ನಿಲ್ಲಿಸಿದ್ದೇವೆ. ಬೇರಿಯಂ ನೈಟ್ರೇಟ್ ಇಲ್ಲದೆ ಸ್ಪಾರ್ಕ್ಲರ್‌ಗಳನ್ನು ತಯಾರಿಸಲು ಸಾಧ್ಯವಿಲ್ಲ. ಬೇರಿಯಂ ನೈಟ್ರೇಟ್ ಬಳಕೆ ಮಾಡದ ಕಾರಣ ಎಲ್ಲ ರೀತಿಯ ಪಟಾಕಿಗಳ ಉತ್ಪಾದನೆಯಲ್ಲಿ ಕುಸಿತವಾಗಿದೆ. ಏಕೆಂದರೆ, ಇದಕ್ಕೆ ಪರ್ಯಾಯ ವಸ್ತು ಕಂಡುಕೊಳ್ಳಲಾಗಿಲ್ಲ. ಜೊತೆಗೆ ಈ ವರ್ಷ ಕಾಗದದಿಂದ ಹಿಡಿದು ರಾಸಾಯನಿಕದವರೆಗಿನ ಎಲ್ಲ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಪಟಾಕಿಗಳ ಉತ್ಪನ್ನಯೂ ದುಬಾರಿಯಾಗಿದೆ ಎನ್ನುತ್ತಾರೆ ಅಯ್ಯನ್ ಪಟಾಕಿ ತಯಾರಿಕೆ ಮಾಲೀಕ ಅಬಿರುಬನ್.
ಇದನ್ನೂ ಓದಿ: ದೆಹಲಿಯಲ್ಲಿ ಪಟಾಕಿಗೆ ನಿಷೇಧ: ಸಿಡಿಸಿದ್ರೆ 200 ರೂ. ದಂಡ, 6 ತಿಂಗಳು ಜೈಲು ಶಿಕ್ಷೆ