ಚೆನ್ನೈ (ತಮಿಳುನಾಡು): ಮೆದುಳು ನಿಷ್ಕ್ರಿಯ ಕಾರಣದಿಂದ ತಮ್ಮ ಅಂಗಾಂಗಗಳನ್ನು ದಾನ ಮಾಡುವ ದಾನಿಗಳ ಅಂತ್ಯಸಂಸ್ಕಾರಕ್ಕೆ ಸರ್ಕಾರಿ ಗೌರವ ಸಲ್ಲಿಸಲಾಗುವುದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಶನಿವಾರ ಘೋಷಿಸಿದ್ದಾರೆ. ಈ ಕುರಿತು ಖುದ್ದು ಅವರೇ, ಸಾಮಾಜಿಕ ಜಾಲತಾಣವಾದ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
''ತಮ್ಮ ಅಂಗಾಂಗಗಳನ್ನು ದಾನ ಮಾಡುವ ಹಾಗೂ ಅನೇಕ ಪ್ರಾಣಗಳನ್ನು ಉಳಿಸುವವರ ತ್ಯಾಗವನ್ನು ಗೌರವಿಸುವ ಸಲುವಾಗಿ, ಸಾವಿಗೂ ಮುನ್ನ ತಮ್ಮ ಅಂಗಾಂಗಗಳನ್ನು ದಾನ ಮಾಡುವವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು'' ಎಂದು ಮುಖ್ಯಮಂತ್ರಿ ಸ್ಟಾಲಿನ್ ಪ್ರಕಟಿಸಿದ್ದಾರೆ. ಇದೇ ವೇಳೆ, ''ಅಂಗಾಂಗ ದಾನದ ಮೂಲಕ ನೂರಾರು ರೋಗಿಗಳಿಗೆ ಮರುಜೀವ ನೀಡುವಲ್ಲಿ ತಮಿಳುನಾಡು ದೇಶದಲ್ಲೇ ಅಗ್ರಸ್ಥಾನದಲ್ಲಿದೆ'' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 5,000 ಮಹಿಳೆಯರಿಂದ ಅಂಗಾಂಗ ದಾನಕ್ಕೆ ನಿರ್ಧಾರ: ಸ್ವಾತಂತ್ರ್ಯೋತ್ಸವದಂದು ಒಪ್ಪಿಗೆ ಪತ್ರ ಸಲ್ಲಿಕೆ
''ದುರಂತ ಸಂದರ್ಭಗಳಲ್ಲಿ ಮೆದುಳು ನಿಷ್ಕ್ರಿಯವಾಗಿ ಕುಟುಂಬದ ಸದಸ್ಯರ ಅಂಗಾಂಗಗಳನ್ನು ದಾನ ಮಾಡಲು ಮುಂದೆ ಬರುವ ಕುಟುಂಬಗಳ ನಿಸ್ವಾರ್ಥ ತ್ಯಾಗದಿಂದ ಈ ಸಾಧನೆ ಸಾಧ್ಯವಾಗಿದೆ'' ಎಂದು ಸ್ಟಾಲಿನ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ತಮಿಳುನಾಡು ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (State Organ and Tissue Transplant Organization - SOTTO)ಯು ಇತ್ತೀಚೆಗೆ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (National Organ and Tissue Transplant Organization - NOTTO)ಯ ಅತ್ಯುತ್ತಮ ಪ್ರಶಸ್ತಿಗೆ ಭಾಜನವಾಗಿದೆ.
ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, 2008ರಲ್ಲಿ ಮೃತರ ಅಂಗಾಂಗ ಕಸಿ ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ತಮಿಳುನಾಡು ರಾಜ್ಯವು 1,706 ದಾನಿಗಳನ್ನು ಹೊಂದಿದೆ. ಇದುವರೆಗೆ ಒಟ್ಟು 786 ಹೃದಯಗಳು, 801 ಶ್ವಾಸಕೋಶಗಳು, 1566 ಯಕೃತ್ತುಗಳು, 3,047 ಮೂತ್ರಪಿಂಡಗಳು, 37 ಮೇದೋಜ್ಜೀರಕ ಗ್ರಂಥಿಗಳು, ಆರು ಸಣ್ಣ ಕರುಳುಗಳು ಹಾಗೂ ನಾಲ್ಕು ಕೈಗಳನ್ನು ಕಸಿ ಮಾಡಲಾಗಿದೆ. ಪ್ರಸ್ತುತ, ತಮಿಳುನಾಡಿನಲ್ಲಿ 40 ಸರ್ಕಾರಿ ಆಸ್ಪತ್ರೆಗಳು ಅಂಗಾಂಗ ಪಡೆಯುವಿಕೆ ಪರವಾನಗಿಯನ್ನು ಹೊಂದಿವೆ. (ಐಎಎನ್ಎಸ್)
ಇದನ್ನೂ ಓದಿ: ದೇಶದಲ್ಲಿ 10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾದ ಅಂಗಾಂಗ ದಾನ