ಕೋಲ್ಕತ್ತಾ: ಪಶ್ಚಿಮ ಬಂಗಾಳದ ಚುನಾವಣಾ ರಣಕಣದ ತಾಪ ಏರುತ್ತಿರುವ ಮಧ್ಯೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಸೌಗತ ರಾಯ್ ಭಾನುವಾರ ಬಿಜೆಪಿಯ ಪ್ರಣಾಳಿಕೆ ಮತ್ತು ಭರವಸೆಗಳು ಸುಳ್ಳಿನ ಸರಮಾಲೆಗಳಾಗಿವೆ ಎಂದು ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಭಾನುವಾರ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾವರಣಗೊಳಿಸಿದ ನಂತರ ರಾಯ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಮಧ್ಯಪ್ರದೇಶದ ನಾಯಕನ ಸಮ್ಮುಖದಲ್ಲಿ ಸ್ಥಳೀಯರ ಬದಲು, ಬಂಗಾಳದ ಚುನಾವಣಾ ಪ್ರಣಾಳಿಕೆಯನ್ನು ಗುಜರಾತಿಯೊಬ್ಬ ಬಿಡುಗಡೆ ಮಾಡಿರುವುದು ದುರದೃಷ್ಟಕರ. ಅಮಿತ್ ಶಾ ಹಿಂದಿಯಲ್ಲಿ ಮಾತ್ರ ಮಾತನಾಡಿದರು. ಪ್ರಣಾಳಿಕೆಯನ್ನು ಬಿಡುಗಡೆ ಮಾಡಲು ಮತ್ತು ಬಂಗಾಳಿಯಲ್ಲಿ ಮಾತನಾಡಬಲ್ಲ ಒಬ್ಬ ಸಮರ್ಥ ವ್ಯಕ್ತಿ ಬಿಜೆಪಿಯಲ್ಲಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಇದು ಬಂಗಾಳದ ಜನತೆಗೆ ಮಾಡಿದ ಅವಮಾನ ಎಂದು ರಾಯ್ ಕಿಡಿಕಾರಿದ್ದಾರೆ.
ಇವರ ಪ್ರಣಾಳಿಕೆಯಲ್ಲಿ ಹೊಸದೇನೂ ಇಲ್ಲ. ಬಿಜೆಪಿ ಪ್ರಣಾಳಿಕೆ ಬರೀ ಟೊಳ್ಳು ಇವರು ಬಂಗಾಳದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಆದ್ದರಿಂದ ಅವರು ಏನು ಹೇಳಿದರೂ ನಡೆಯುತ್ತದೆ ಎಂದು ಅವರು ಹೇಳಿದರು.
ಬಿಜೆಪಿ ಭರವಸೆಯನ್ನು ಯಾರೂ ನಂಬಬಾರದು. 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರತಿ ವ್ಯಕ್ತಿಗೆ 15 ಲಕ್ಷ ರೂ. ಮತ್ತು ಪ್ರತಿವರ್ಷ 2 ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿದ್ದು, ಇದುವರೆಗೂ ಈಡೇರಿಲ್ಲ. ಪಶ್ಚಿಮ ಬಂಗಾಳದಲ್ಲಿ ಕೆಜಿಯಿಂದ ಹಿಡಿದು ಸ್ನಾತಕೋತ್ತರ ಹಂತದವರೆಗಿನ ಎಲ್ಲ ಮಹಿಳೆಯರಿಗೆ ಶಿಕ್ಷಣವನ್ನು ಉಚಿತವಾಗಿಸುವ ಬಿಜೆಪಿಯ ಭರವಸೆ ಬಗ್ಗೆ ವ್ಯಂಗ್ಯವಾಡಿದ ರಾಯ್ ಹಾಗಾದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಹಿಳೆಯರಿಗೆ ಶಿಕ್ಷಣ ಉಚಿತವಾಗಿದೆಯೇ? ಎಂದು ಕೇಳಿದ್ರು.
ಬಿಜೆಪಿ ಭರವಸೆ ನೀಡಿದ ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಅನುಷ್ಠಾನದ ಕುರಿತು ಮಾತನಾಡಿದ ರಾಯ್ ಬಿಜೆಪಿ ತ್ರಿಪುರದಲ್ಲಿ ಏಳನೇ ವೇತನ ಆಯೋಗ ಅನುಷ್ಠಾನಕ್ಕೆ ತರುವುದಾಗಿ ಹೇಳಿತ್ತು. ಆದರೆ, ಇದುವರೆಗೂ 7ನೇ ವೇತನ ಆಯೋಗದಂತೆ ಸರ್ಕಾರಿ ನೌಕರರಿಗೆ ಸಂಬಳ ಹೆಚ್ಚಿಸಲಾಗಿಲ್ಲ ಎಂದ್ರು.
ಇದನ್ನೂ ಓದಿ:ಕಾಬೂಲ್‌ನಲ್ಲಿ ಬಾಂಬ್ ಸ್ಫೋಟ: 24 ಗಂಟೆಗಳಲ್ಲಿ 7 ಮಂದಿ ಸಾವು