ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮತ್ತು ಹಾಲಿ ಎಂಎಲ್ಎ ಜ್ಯೋತ್ಸ್ನಾ ಮಂಡಿ ಅವರ ಆಸ್ತಿ ಶೇ 1985.68 ರಷ್ಟು ಹೆಚ್ಚಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.
ಮಂಡಿ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಅವರ ಒಟ್ಟು ಆಸ್ತಿ 2016 ರಲ್ಲಿ 1,96,633 ರೂ. ಇತ್ತು. ಆದರೆ, 2021ರಲ್ಲಿ ಅವರ ಆಸ್ತಿ ಮೌಲ್ಯ 41,01,144 ರೂಗಳಿಗೆ ಏರಿದೆ. ಜ್ಯೋತ್ಸ್ನಾ ಮಂಡಿ ಬಂಕುರಾ ಜಿಲ್ಲೆಯ ರಾಣಿಬಂಧ (ಎಸ್‌ಟಿ) ಕ್ಷೇತ್ರದಿಂದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣಾ ಆಯೋಗ ಮತ್ತು ಎಡಿಆರ್, ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಂದು ನಡೆಯಲಿರುವ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ 30 ಅಭ್ಯರ್ಥಿಗಳ ಅಫಿಡವಿಟ್‌ಗಳ ಜಂಟಿ ಸಮೀಕ್ಷೆಯನ್ನು ನಡೆಸಿದೆ. ಈ ಸ್ಪರ್ಧಿಗಳ ಪೈಕಿ 2016ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಪುರುಲಿಯಾ ವಿಧಾನಸಭಾ ಸ್ಥಾನವನ್ನು ಗೆದ್ದ ಮತ್ತು ಈಗ ಬಿಜೆಪಿಗೆ ಸೇರ್ಪಡೆಯಾದ ಸುದೀಪ್ ಕುಮಾರ್ ಮುಖರ್ಜಿ ಅವರ ಆಸ್ತಿ ಶೇ 288.86ರಷ್ಟು ಹೆಚ್ಚಾಗಿದೆ. ಐದು ವರ್ಷಗಳ ಹಿಂದೆ ಮುಖರ್ಜಿ ಘೋಷಿಸಿದ ಆಸ್ತಿಯ ನಿವ್ವಳ ಮೌಲ್ಯ 11,57,945 ರೂ.ಗಳಷ್ಟಿತ್ತು. 2021ರಲ್ಲಿ ಅವುಗಳ ಮೌಲ್ಯ 45,02,782 ರೂಪಾಯಿಯಾಗಿದೆ.
ಪಶ್ಚಿಮ ಮೇದಿನಿಪುರ ಜಿಲ್ಲೆಯ ಕೇಶರಿ (ಎಸ್‌ಟಿ) ಕ್ಷೇತ್ರದ ಟಿಎಂಸಿಯ ಸಿಟ್ಟಿಂಗ್ ಎಂಎಲ್ಎ ಪರೇಶ್ ಮುರ್ಮು ಅವರ ಆಸ್ತಿ ಕೂಡ ಶೇ 246.34ರಷ್ಟು ಏರಿಕೆಯಾಗಿದೆ. 2016ರಲ್ಲಿ ಅವರ ಆಸ್ತಿ 11,57,926 ರೂ.ಗಳಷ್ಟಿತ್ತು. ಇದೀಗ ಅವುಗಳ ಮೌಲ್ಯ 40,10,329 ರೂಪಾಯಿಗಳಾಗಿವೆ ಎಂದು ಸಮೀಕ್ಷೆ ವರದಿಯಲ್ಲಿ ತಿಳಿದುಬಂದಿದೆ.
ಇನ್ನೂ ಕೆಲ ಶಾಸಕರ ಆಸ್ತಿ 2016 ರಿಂದ ಕಡಿಮೆಯಾಗಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಅವರಲ್ಲೊಬ್ಬರು ದಕ್ಷಿಣ 24 ಪರಗಣ ಜಿಲ್ಲೆಯ ಜಯನಗರ (ಎಸ್‌ಸಿ) ಹಾಲಿ ಶಾಸಕ ಬಿಸ್ವಾನಾಥ ದಾಸ್. ಹಿಂದಿನ ವಿಧಾನಸಭಾ ಚುನಾವಣೆಗೆ ಮುನ್ನ ಅವರ ಆಸ್ತಿ 46,85,523 ರೂ. ಇತ್ತು. ಇದೀಗ ಅವರ ಆಸ್ತಿ ಮೌಲ್ಯ 14,41,200 ರೂಪಾಯಿಯಾಗಿದೆ. 2021ರಲ್ಲಿ ಅವರ ಆಸ್ತಿ ಮೌಲ್ಯ ಶೇಕಡಾ 69.27ರಷ್ಟು ಕಡಿಮೆಯಾಗಿದೆ.
ಪುರುಲಿಯಾ ಜಿಲ್ಲೆಯ ಮನ್‌ಬಜಾರ್ (ಎಸ್‌ಟಿ) ಕ್ಷೇತ್ರದ ಟಿಎಂಸಿ ಎಂಎಲ್ಎ ಸಂಧ್ಯಾರಾಣಿ ತುಡು ಅವರ ಆಸ್ತಿ ಕೂಡ ಶೇ 60.20ರಷ್ಟು ಕಡಿಮೆಯಾಗಿದೆ. ಇವರ ಆಸ್ತಿ 2016ರಲ್ಲಿ 53,97,129 ರೂ. ಇತ್ತು. ಇದೀಗ 21,48,082 ರೂ.ಗೆ ಕುಸಿದಿದೆ.
294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಯ ಚುನಾವಣೆ ಎಂಟು ಹಂತಗಳಲ್ಲಿ ನಡೆಯಲಿದ್ದು, ಏಪ್ರಿಲ್ 29 ರಂದು ಅಂತಿಮ ಸುತ್ತಿನ ಮತದಾನ ನಡೆಯಲಿದೆ. ಮತ ಎಣಿಕೆ ಮೇ 2ರಂದು ನಡೆಯಲಿದೆ.