ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಮುಂಬರುವ 2021ರ ವಿಧಾನಸಭಾ ಚುನಾವಣೆ ಸಂಬಂಧ ಇಂದು ತಮ್ಮ ಕಾಲಿಘಾಟ್ ಕಚೇರಿಯಿಂದ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷ ಟಿಎಂಸಿ ತನ್ನ ಚುನಾವಣಾ ಪ್ರಣಾಳಿಕೆ ಇಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಭಾನುವಾರವೂ ಟಿಎಂಸಿ ಮೂರನೇ ಬಾರಿಗೆ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಿತ್ತು. ಆದರೆ, ಕಾರ್ಯಕ್ರಮ ಮುಂದೂಡಲು ಯಾವುದೇ ಕಾರಣ ನೀಡಿರಲಿಲ್ಲ.
ಮಾಧ್ಯಮ ವರದಿಗಳ ಪ್ರಕಾರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಕ್ಷದ ಪ್ರಣಾಳಿಕೆಯನ್ನು ತಮ್ಮ ಕಾಲಿಘಾಟ್ ನಿವಾಸದಲ್ಲಿ ಬಿಡುಗಡೆ ಮಾಡಬಹುದು. ಭಾನುವಾರವೇ ತಮ್ಮ ನಿವಾಸದಿಂದ ಪ್ರಣಾಳಿಕೆ ಪ್ರಕಟಿಸಬೇಕಾಗಿತ್ತು.
ಮಾರ್ಚ್ 9ಕ್ಕೆ ಪ್ರಣಾಳಿಕೆ ಬಿಡುಗಡೆ ದಿನಾಂಕ ಘೋಷಿಸಿತ್ತು. ಆದರೆ ಕೋಲ್ಕತ್ತಾದಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಒಂಬತ್ತು ಜನ ಸಾವಿಗೀಡಾದ ನಂತರ ಪಕ್ಷವು ಪ್ರಣಾಳಿಕೆ ಬಿಡುಗಡೆ ದಿನಾಂಕವನ್ನು ಮಾರ್ಚ್ 11ಕ್ಕೆ ನಿಗದಿಪಡಿಸಿತ್ತು. ಮಾ. 10ರಂದು ಪೂರ್ವ ಮಿಡ್ನಾಪೋರ್ ಜಿಲ್ಲೆಯ ನಂದಿಗ್ರಾಮನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಬ್ಯಾನರ್ಜಿ ಅವರು ಗಾಯಗೊಂಡ ಕಾರಣ ಪ್ರಣಾಳಿಕೆ ಹೊರಡಿಸಲಿಲ್ಲ.
ಮಾರ್ಚ್ 5ರಂದು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಪಕ್ಷದ 291 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರು. ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆಗೆ ಎಂಟು ಹಂತಗಳ ಮತದಾನ ನಡೆಯಲಿದ್ದು, ಮಾರ್ಚ್ 27 ರಿಂದ ಮತದಾನ ಪ್ರಾರಂಭವಾಗಲಿದೆ. ಮೇ 2ರಂದು ಫಲಿತಾಂಶ ಹೊರಬರಲಿದೆ.