ಕೋಲ್ಕತ್ತಾ: ದಿನದಿಂದ ದಿನಕ್ಕೆ ವಿಧಾನಸಭೆ ಚುನಾವಣೆ ಕಾವು ರಂಗೇರುತ್ತಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮದನಿಪುರ ಬಿಜೆಪಿ ಅಭ್ಯರ್ಥಿ ಸಮಿತ್ ದಾಸ್ ಪರ ಚುನಾವಣಾ ಪ್ರಚಾರ ನಡೆಸಿದ ನಂತರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಇರಾನಿ, ರಾಜ್ಯದ ಬಡವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬಡವರಿಗೆ ಮತ್ತು ರಾಜ್ಯದ ಅಭಿವೃದ್ಧಿಗಾಗಿ 4 ಲಕ್ಷ ಕೋಟಿ ರೂ. ನೀಡಿದ್ದಾರೆ. ಆದರೆ ಮಮತಾ ಬ್ಯಾನರ್ಜಿ ಅವರು ಏನು ಮಾಡಿದ್ದಾರೆ? ದೀದಿ ಕೇವಲ ಖಜಾನೆಯನ್ನು ಲೂಟಿ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ದೀದಿಯ ಆಟ ಮುಗಿಯುವ ಸಮಯ ಬಂದಿದೆ. ಬಂಗಾಳದ ಜನರು ಮಮತಾ ಬ್ಯಾನರ್ಜಿಗೆ ತಕ್ಕ ಪಾಠ ಕಲಿಸುತ್ತಾರೆ. 'ಟಿಎಂಸಿ ಓಡಿಸಿ, ಬಿಜೆಪಿ ತನ್ನಿ, ಬಾಂಗ್ಲಾ ಉಳಿಸಿ' ಎಂದು ಜನರಲ್ಲಿ ಮನವಿ ಮಾಡಿದರು.
294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮಾರ್ಚ್ 27 ರಿಂದ ಎಂಟು ಹಂತಗಳಲ್ಲಿ ನಡೆಯಲಿದ್ದು, ಅಂತಿಮ ಸುತ್ತಿನ ಮತದಾನ ಏಪ್ರಿಲ್ 29 ರಿಂದ ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ.