ಕೋಲ್ಕತಾ (ಪಶ್ಚಿಮ ಬಂಗಾಳ): ಬಿಜೆಪಿಗೆ ಸೇರುವ ಬಗ್ಗೆ ಊಹಾಪೋಹಗಳಿಗೆ ತೆರೆ ಎಳೆದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಶತಾಬ್ದಿ ರಾಯ್ ಅವರನ್ನು ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ಉಪಾಧ್ಯಕ್ಷೆಯನ್ನಾಗಿ ನೇಮಕ ಮಾಡಲಾಗಿದೆ.
ತೃಣಮೂಲ ಕಾಂಗ್ರೆಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಶತಾಬ್ದಿ ರಾಯ್ ಜೊತೆಗೆ ಪಕ್ಷದ ನಾಯಕರಾದ ಮೊವಾಝೆಮ್ ಹೊಸೈನ್ ಹಾಗೂ ಶಂಕರ್ ಚಕ್ರಬೊರ್ತಿ ಅವರನ್ನೂ ಕೂಡಾ ಪಕ್ಷದ ಉಪಾಧ್ಯಕ್ಷರುಗಳನ್ನಾಗಿ ನೇಮಕ ಮಾಡಲಾಗಿದೆ.
ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರ ಮಾರ್ಗದರ್ಶನ ಮತ್ತು ಪ್ರೇರಣೆಯಡಿಯಲ್ಲಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್ನ ಹುದ್ದೆಗಳಿಗೆ ಹೊಸ ಸದಸ್ಯರನ್ನು ಘೋಷಿಸಿದೆ. ಇನ್ನು ಯಾವುದೇ ವಿಚಾರದಲ್ಲೂ ಬದಲಾವಣೆ ಆಗುವುದಿಲ್ಲ ಎಂದು ಪಕ್ಷ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಅಮೆರಿಕದ ಕ್ಯಾಪಿಟಲ್ ಮುಂದೆ ಕೋಲಂ.. ಇದರೊಳಗೆ ಅಂಥಾದೇನೈತಿ!?
ಕೆಲವು ದಿನಗಳ ಹಿಂದೆ ಶತಾಬ್ದಿ ರಾಯ್ ದೆಹಲಿಗೆ ಹೋಗುವುದಾಗಿ ಘೋಷಿಸಿದ ನಂತರ, ಅವರು ಬಿಜೆಪಿ ಸೇರುವುದಾಗಿ ಊಹಾಪೋಹಗಳು ಹರಿದಾಡುತ್ತಿದ್ದವು. ಅದಾದ ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಶತಾಬ್ದಿ ಅವರನ್ನು ಭೇಟಿ ಮಾಡಿ ಮನವೊಲಿಸಿದ್ದರು ಎನ್ನಲಾಗಿದೆ.
ಇದಾದ ನಂತರ ಹೇಳಿಕೆ ನೀಡಿದ್ದ ಶತಾಬ್ದಿ ರಾಯ್ ನಾನು ಟಿಎಂಸಿಯಲ್ಲಿಯೇ ಮುಂದುವರೆಯುತ್ತೇನೆ, ಪಕ್ಷದ ಎಲ್ಲಾ ಸದಸ್ಯರು ಒಟ್ಟಾಗಿ ಕೆಲಸ ಮಾಡುವಂತೆ ನಾನು ಮನವಿ ಮಾಡುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.