ಮುಂಬೈ : ಮಹಾನಗರಿ ಮುಂಬೈ ಎಂದ ಕೂಡಲೇ ಬೃಹತ್ ಕಟ್ಟಡಗಳು, ತುಂಬಿದ ಜನಸಂದಣಿ, ವ್ಯಾಪಾರ ವ್ಯವಹಾರಗಳು ನಮ್ಮ ಕಣ್ಣಮುಂದೆ ಬರುತ್ತದೆ. ಜೊತೆಗೆ ಈ ನಗರವನ್ನು ದೇಶದ ಆರ್ಥಿಕ ರಾಜಧಾನಿ ಎಂದು ಕರೆಯತ್ತೇವೆ. ಇದೆಲ್ಲ ಒಂದೆಡೆಯಾದರೆ ಏಷ್ಯಾದಲ್ಲೇ ಅತಿದೊಡ್ಡ ಸ್ಲಂ ಧಾರಾವಿ ಇರುವುದೂ ಇಲ್ಲೇ. ಅಷ್ಟೆ ಅಲ್ಲದೆ ಅನೇಕ ಸಣ್ಣ ಸಣ್ಣ ಸ್ಲಂಗಳನ್ನು ಮುಂಬೈ ತನ್ನ ಒಡಲಿನಲ್ಲಿ ಇರಿಸಿಕೊಂಡಿದೆ.
ಈ ಸ್ಲಂನಲ್ಲಿ ವಾಸಿಸುವ ಜನರ ಬಗ್ಗೆ ಹೊರಗಿನ ಜನರಿಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಈ ಸ್ಲಂ ವಾಸಿಸುವವರು ಅಪರಾಧ ಕೃತ್ಯಗಳಲ್ಲಿ ತೊಡಗಿರುತ್ತಾರೆ. ಇಲ್ಲಿನ ಮಕ್ಕಳು ಶಾಲೆಗೆ ಹೋಗದೇ ವ್ಯಸನಿಗಳಾಗಿರುತ್ತಾರೆ. ಹೀಗೆಲ್ಲ ಕಲ್ಪನೆ ನಮ್ಮ ಕಣ್ಣ ಮುಂದೆ ಬಂದು ಹೋಗುತ್ತದೆ. ಆದರೆ ಇದಕ್ಕೆಲ್ಲ ಅಪವಾದ ಎಂಬಂತೆ ಸ್ಲಂನಲ್ಲಿ ಬೆಳೆದ ಯುವ ಉದ್ಯಮಿಯೊಬ್ಬರು ಸ್ಲಂನ ಯುವಕರಿಗೆ ಉದ್ಯೋಗ ಒದಗಿಸಲು ಮುಂದಾಗಿದ್ದಾರೆ. ಉದಯ್ ಪವಾರ್ ಎಂಬವರೇ ಸ್ಲಂನಿಂದ ಬಂದು ನಿರುದ್ಯೋಗಿ ಯುವಕರ ಆಶಾಕಿರಣವಾಗಿದ್ದಾರೆ.
ನಿರುದ್ಯೋಗ ನಿವಾರಿಸಲು ಟಿಂಗ್ ಟಾಂಗ್ ಆ್ಯಪ್ : ಸ್ಲಂಗಳಲ್ಲಿ ವಾಸಿಸುವ ಮಕ್ಕಳು ದುಷ್ಕೃತ್ಯದಲ್ಲಿ ತೊಡಗಲು ಪ್ರಮುಖ ಕಾರಣ ನಿರುದ್ಯೋಗವಾಗಿದೆ. ಇಲ್ಲಿನ ಮಕ್ಕಳಿಗೆ ವಿದ್ಯಾಭ್ಯಾಸ ಇಲ್ಲದಿದ್ದರೂ ಅವರ ಕೌಶಲ್ಯಕ್ಕೆ ಕೊರತೆ ಇಲ್ಲ. ಹೀಗಾಗಿ ಈ ಮಕ್ಕಳಿಗೆ ಉಜ್ವಲ ಭವಿಷ್ಯ ಒದಗಿಸಲು ಯುವ ಉದ್ಯಮಿ ಉದಯ್ ಪವಾರ್ ಮುಂದಾಗಿದ್ದಾರೆ. ಸ್ಲಂಗಳಲ್ಲಿ ವಾಸಿಸುವ ಮಕ್ಕಳಿಗೆ ಉದ್ಯೋಗ ಕಲ್ಪಿಸಲು ಉದಯ್ ಟಿಂಗ್ ಟಾಂಗ್ ಆ್ಯಪ್ ರೂಪಿಸಿದ್ದು, ಈ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಉದಯ್ ಪವಾರ್, ನಾನು ಜೀಜಾಮಾತಾನಗರದ ಸ್ಲಂನಲ್ಲಿ ಬೆಳೆದಿದ್ದೇನೆ. ಆದರೆ ನಾನು ಸ್ಲಂನಲ್ಲಿ ವಾಸಿಸುತ್ತೇವೆ ಎಂದು ಹೇಳಿದಾಗ ಜನರ ದೃಷ್ಟಿ ಕೋನ ಬದಲಾಗುತ್ತಿತ್ತು. ಸ್ಲಂ ನಿವಾಸಿಗಳು ಎಂದರೆ ಎಲ್ಲರೂ ತಿರಸ್ಕಾರ ಭಾವದಿಂದ ಕಾಣುತ್ತಾರೆ. ಆದರೆ ಇಲ್ಲಿ ವಾಸಿಸುವ ಪ್ರತಿಯೊಬ್ಬರಲ್ಲೂ ಒಂದೊಂದು ವಿಶೇಷ ಗುಣಗಳು ಮತ್ತು ಕೌಶಲ್ಯಗಳಿದೆ ಎಂದು ಹೇಳಿದರು.
ನನಗೆ ಚಿಕ್ಕ ವಯಸ್ಸಿನಲ್ಲೇ ಸಮಾಜಸೇವೆ ಮಾಡಬೇಕೆಂಬ ಹಂಬಲ ಇತ್ತು. ನನ್ನ ತಂದೆ ತಾಯಿ, ಸಂಬಂಧಿಕರು ಎಲ್ಲರೂ ನಿರುದ್ಯೋಗದ ಬಗ್ಗೆ ಮಾತನಾಡುತ್ತಿದ್ದರು. ಆಗ ಈ ನಿರುದ್ಯೋಗ ನಿವಾರಣೆಗೆ ಏನಾದರೂ ಮಾಡಬೇಕೆಂದು ಆಲೋಚಿಸಿದಾಗ ಅಪ್ಲಿಕೇಶನ್ ಮಾಡುವ ಆಲೋಚನೆ ಬಂತು ಎಂದು ಹೇಳಿದರು.
ಆ್ಯಪ್ ತಯಾರಿಸುವ ಬಗ್ಗೆ ನಾನು ನನ್ನ ಗೆಳೆಯರಲ್ಲಿ ಹೇಳಿದಾಗ ಅವರು ನನಗೆ ತುಂಬಾ ಪ್ರೋತ್ಸಾಹ ನೀಡಿದರು. ನಾನು 11 ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದೇನೆ. ನನಗೆ ಈ ಬಗ್ಗೆ ಗೊತ್ತಿಲ್ಲ ಎಂದು ನನ್ನ ಇಂಜಿನಿಯರ್ ಸ್ನೇಹಿತರ ಬಳಿ ಹೇಳಿದಾಗ ನನ್ನ ಪರಿಕಲ್ಪನೆಯನ್ನು ಇಷ್ಟಪಟ್ಟು ನನಗೆ ಸಹಾಯ ಮಾಡಿದರು. ಈ ಅಪ್ಲಿಕೇಶನ್ ಮೂಲಕ ನಾವು ಮುಂಬೈ ಮತ್ತು ಇತರ ನಗರಗಳಿಂದ ವೃತ್ತಿಪರರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಈ ಟಿಂಗ್ ಟಾಂಗ್ ಅಪ್ಲಿಕೇಶನ್‌ನಲ್ಲಿ ನೀವು ದೈನಂದಿನ ಬಳಕೆಗೆ ಬೇಕಾದ ಮಾಹಿತಿಯನ್ನು ಪಡೆಯಬಹುದು ಎಂದು ಹೇಳಿದರು.
ಟಿಂಗ್ ಟಾಂಗ್ ಆ್ಯಪ್ ವಿವರ : ಈ ಆ್ಯಪ್ ಬಗ್ಗೆ ಮಾಹಿತಿ ನೀಡಿದ ಅವರು,"ನಮ್ಮ ದೈನಂದಿನ ಜೀವನದಲ್ಲಿ ಬೇಕಾದ ಮಾಹಿತಿಯನ್ನು ಈ ಆ್ಯಪ್ ನೀಡುತ್ತದೆ. ಅಂದರೆ ನಿಮ್ಮ ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ನಿಮಗೆ ಹತ್ತಿರದ ಕ್ಲಿನಿಕ್ ಅಥವಾ ಆಸ್ಪತ್ರೆಯ ಬಗ್ಗೆ ಮಾಹಿತಿ ನೀಡುತ್ತದೆ. ಈ ಅಪ್ಲಿಕೇಶನ್ ಮೂಲಕ ಪ್ಲಂಬರ್, ಎಲೆಕ್ಟ್ರಿಷಿಯನ್, ವಕೀಲರು, ಸಿಎ ಮುಂತಾದವರನ್ನು ಸಂಪರ್ಕಿಸಬಹುದು. ಈ ಆ್ಯಪ್ ಮೂಲಕ ನಾವು ಮುಂಬೈ ಮತ್ತು ಇತರ ಸಿಟಿಗಳಲ್ಲಿರುವ ವ್ಯಾಪಾರಿಗಳನ್ನು ನೋಂದಣಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು. ಈ ಮೂಲಕ ಅದೆಷ್ಟೋ ಮಂದಿ ಮನೆಯಿಂದಲೇ ಕೆಲಸ ಪಡೆಯುತ್ತಾರೆ ಎಂದು ಹೇಳಿದರು.
ನೋಂದಣಿ ಶುಲ್ಕ ದಿನಕ್ಕೆ 1 ರೂ : ನಾನು ರಚಿಸಿದ ಅಪ್ಲಿಕೇಶನ್ ರೀತಿಯಲ್ಲೇ ಮಾರುಕಟ್ಟೆಯಲ್ಲಿ ವಿವಿಧ ಆ್ಯಪ್ಗಳಿವೆ. ಆದರೆ ಈ ಅಪ್ಲಿಕೇಶನ್‌ಗಳಲ್ಲಿ ನಿಮ್ಮ ವ್ಯವಹಾರವನ್ನು ನೋಂದಾಯಿಸಿಕೊಳ್ಳಬೇಕಾದರೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ ಉದ್ಯೋಗ ದೊರೆತರೆ ಆ್ಯಪ್ ಕಂಪನಿಗೆ ಕಮಿಷನ್ ನೀಡಬೇಕು. ಆದರೆ ನಮ್ಮ ಆ್ಯಪ್ನಲ್ಲಿ ದಿನಕ್ಕೆ ಕೇವಲ ಒಂದು ರೂಪಾಯಿಯಂತೆ ನೋಂದಣಿ ಮಾಡಿಕೊಳ್ಳಬಹುದು. ಅಂದರೆ ವರ್ಷಕ್ಕೆ ಕೇವಲ 365 ರೂಪಾಯಿಗಳು. ಇದು ಎಲ್ಲ ರೀತಿಯ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ಜೊತೆಗೆ ಇಲ್ಲಿ ಯಾವುದೇ ಕಮಿಷನ್ ಪಾವತಿಸಬೇಕಿಲ್ಲ. ಇದು ಎಲ್ಲರಿಗೂ ಕೈಗೆಟಕುವ ಆ್ಯಪ್ ಎಂದು ಹೇಳಿದರು.
ಇದನ್ನೂ ಓದಿ :ಬಜೆಟ್ ಶ್ರೇಣಿಯ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದ ಎಂಜಿ ಮೋಟಾರ್ಸ್: ಬೆಲೆ 7.98 ಲಕ್ಷ