ಮೌಸುನಿ (ಪಶ್ಚಿಮ ಬಂಗಾಳ): ಸಮುದ್ರದ ಅಲೆಗಳ ಅಬ್ಬರಕ್ಕೆ ಪಶ್ಚಿಮ ಬಂಗಾಳದ ಮೌಸುನಿ ದ್ವೀಪ ತತ್ತರಿಸಿದೆ. ಇಡೀ ದ್ವೀಪ ಪ್ರದೇಶದ ಜಲಾವೃತಗೊಂಡಿದ್ದು, ಈ ಹಠಾತ್ ಪ್ರವಾಹದಿಂದ ವ್ಯಾಪಾರಿಗಳಿಂದ ಹಿಡಿದು ಸ್ಥಳೀಯ ನಿವಾಸಿಗಳವರೆಗೆ ಎಲ್ಲರೂ ತೊಂದರೆ ಅನುಭವಿಸಿದ್ದಾರೆ. ಮೇಲಾಗಿ ಒಂದೇ ಹೊಡೆತಕ್ಕೆ ಪ್ರವಾಸೋದ್ಯಮ ಮಕಾಡೆ ಮಲಗಿದೆ.
ದಕ್ಷಿಣ 24 ಪರಗಣ ಜಿಲ್ಲೆಯ ಮೌಸುನಿ ದ್ವೀಪವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಬೇಸಿಗೆಯಲ್ಲಿ ಹೆಚ್ಚು ಜನರು ಆಯ್ಕೆ ಮಾಡಿಕೊಳ್ಳುವ ನೆಚ್ಚಿನ ಬೀಚ್‌ಗಳಲ್ಲಿ ಮೌಸುನಿ ಕೂಡ ಒಂದು. ಕಳೆದ ಎರಡು ವರ್ಷಗಳಿಂದ ಚಂಡಮಾರುತ ಮತ್ತು ಕೋವಿಡ್ ಹಾವಳಿಗೆ ದ್ವೀಪ ಪ್ರದೇಶದಲ್ಲಿ ಪ್ರವಾಸೋದ್ಯಮ ಸಂಪೂರ್ಣ ನೆಲ ಕಚ್ಚಿತ್ತು. ಇದೀಗ ಕೆಲ ದಿನಗಳಿಂದ ಪ್ರವಾಸಿಗರ ಆಗಮನದಿಂದ ಪ್ರವಾಸೋದ್ಯಮ ಲಯಕ್ಕೆ ಮರಳಲು ಪ್ರಾರಂಭಿಸಿತ್ತು.
ಆದರೆ, ಸೋಮವಾರ ಹುಣ್ಣಿಮೆಯ ದಿನದಂದು ಸಮುದ್ರದ ಅಲೆಗಳು ಅಬ್ಬರಿಸಿದ್ದು, ತೀರದಲ್ಲಿದ್ದ ಅಣೆಕಟ್ಟು ಒಡೆದುಹೋಗಿದೆ. ಪರಿಣಾಮ ಪ್ರವಾಸಿ ಕುಟೀರಗಳು ಸೇರಿದಂತೆ ಅನೇಕ ಪ್ರದೇಶಗಳು ಜಲಾವೃತಗೊಂಡು, ಅಪಾರ ಹಾನಿ ಸಂಭವಿಸಿವೆ, ಕೆಲವು ಕುಟೀರಗಳು ಅಲೆಗಳ ನೀರಿನಲ್ಲಿ ಕೊಚ್ಚಿಹೋಗಿವೆ. ಈಗಾಗಲೇ ಅಣೆಕಟ್ಟಿನ ಮರು ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದರೂ, ಅಲೆಗಳ ಹೊಡೆತಕ್ಕೆ ಯಾವಾಗ ಏನಾಗಲಿದೆ ಎಂಬ ಆತಂಕ ಸ್ಥಳೀಯರಲ್ಲಿದೆ.
ಇದನ್ನೂ ಓದಿ: ಅಸ್ಸೋಂ ರಣಭೀಕರ ಮಳೆ: ಐವರು ಸಾವು, 230ಕ್ಕೂ ಅಧಿಕ ಹಳ್ಳಿಗಳಿಗೆ ಹಾನಿ