ಧರ್ಮಶಾಲಾ (ಹಿಮಾಚಲ ಪ್ರದೇಶ) : ಚೀನಾ ದೇಶವು ಮಹಾತ್ಮ ಗಾಂಧಿಯಿಂದ ಬಹಳಷ್ಟು ಕಲಿಯಬೇಕಿದೆ ಎಂದು ಟಿಬೆಟ್‌ನ ಶಿಕ್ಷಣ ಮಂತ್ರಿ ಡೊಲ್ಮಾ ಥರ್ಲಾಮ್ ಅಭಿಪ್ರಾಯಪಟ್ಟರು. ಕೇಂದ್ರ ಟಿಬೆಟಿಯನ್ ಆಡಳಿತವು ಸೋಮವಾರ ಧರ್ಮಶಾಲಾದಲ್ಲಿ ಮಹಾತ್ಮ ಗಾಂಧಿಯವರ 154ನೇ ಜನ್ಮದಿನದ ಸಂದರ್ಭದಲ್ಲಿ ಅಧಿಕೃತ ಸಮಾರಂಭ ಆಯೋಜಿಸಿತ್ತು. ಟಿಬೆಟಿಯನ್ ಸರ್ಕಾರದ ಮಂತ್ರಿಗಳು ಮತ್ತು ಕೇಂದ್ರ ಟಿಬೆಟಿಯನ್ ಆಡಳಿತದ ಸಿಬ್ಬಂದಿ, ಉತ್ತರ ಭಾರತದ ಬೆಟ್ಟದ ಪಟ್ಟಣವಾದ ಧರ್ಮಶಾಲಾದಲ್ಲಿರುವ ಗಡಿಪಾರು ಸರ್ಕಾರದ ಪ್ರಧಾನ ಕಚೇರಿಯಲ್ಲಿರುವ ಗ್ಯಾಂಗ್ಕಿ ಪಾರ್ಕ್‌ನಲ್ಲಿ ಅವರು ಒಟ್ಟುಗೂಡಿದರು. ಮಹಾತ್ಮಾ ಗಾಂಧಿಯವರಿಗೆ ಗೌರವ ಸಲ್ಲಿಸಿ ಟಿಬೆಟ್‌ನಲ್ಲಿ ಶಾಂತಿಗಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಡೊಲ್ಮಾ ಥರ್ಲಾಮ್, ಮಹಾತ್ಮ ಗಾಂಧಿಯವರ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಕುರಿತು ಮಾತನಾಡಿದರು. ಗಾಂಧೀಜಿಯವರ ಆಲೋಚನೆಗಳು ಎಂದಿಗಿಂತಲೂ ಹೆಚ್ಚು ಪ್ರಸ್ತುತ ಎಂದರು. "ಗಾಂಧೀಜಿ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಅಳವಡಿಸಿಕೊಳ್ಳುವ ಮೂಲಕ ಬಹಳಷ್ಟು ಸಾಧನೆ ಮಾಡಿದ್ದಾರೆ. ನಾವು ನಮ್ಮ ದೇಶವನ್ನು ಹೇಗೆ ಮರಳಿ ಪಡೆಯಬಹುದು ಎಂಬುದಕ್ಕೆ ಇದು ಟಿಬೆಟಿಯನ್ನರಿಗೆ ಉತ್ತಮ ಉದಾಹರಣೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
"ನಮಗೆ ಆಶಾದಾಯಕ ಸಮಯ ಬರುತ್ತದೆ. ಚೀನಾ ಖಂಡಿತವಾಗಿಯೂ ಕಲಿಯುತ್ತದೆ. ಅವರು ಯಾವುದೇ ದಬ್ಬಾಳಿಕೆಯ ದಮನಕಾರಿ ನೀತಿಗಳನ್ನು ಅಳವಡಿಸಿಕೊಂಡರೂ ಟಿಬೆಟಿಯನ್ ಮನೋಭಾವವನ್ನು ಸುಲಭವಾಗಿ ಕಡೆಗಣಿಸಲಾಗದು" ಎಂದರು.
"ಮಹಾತ್ಮ ಗಾಂಧಿ ಜಯಂತಿ ಟಿಬೆಟಿಯನ್ನರಿಗೆ ಮಹತ್ವದ ದಿನವಾಗಿದೆ. ಏಕೆಂದರೆ ಈ ದಿನವನ್ನು ಅಂತರರಾಷ್ಟ್ರೀಯವಾಗಿ ಅಹಿಂಸಾ ದಿನವೆಂದು ಆಚರಿಸಲಾಗುತ್ತದೆ. ಅಹಿಂಸೆ ಎಂದರೆ ಕೇವಲ ದೈಹಿಕ ಅಹಿಂಸೆಯಲ್ಲ, ಮಾತಿನ ಮೂಲಕ ಅಥವಾ ಇತರರ ಬಗ್ಗೆ ನಿಮ್ಮ ಆಲೋಚನೆಯೂ ಇದರಲ್ಲಿ ಸೇರಿದೆ. ಆದ್ದರಿಂದ ಇದು ಬಹಳ ಮಹತ್ವದ್ದು" ಎಂದು ತಿಳಿಸಿದರು.
'ಬಾಪು' ನೆನಪು.. ಭಾರತದ ಸ್ವಾತಂತ್ರ್ಯ ಹೋರಾಟದ ಸಂಕೇತ: ಅಕ್ಟೋಬರ್ 2, 1869 ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ಜನಿಸಿದ ಮೋಹನ್ದಾಸ ಕರಮಚಂದ್ ಗಾಂಧಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಅಹಿಂಸಾತ್ಮಕವಾಗಿ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾನ್ ಸಂತ. ಅವರ ಈ ಹೋರಾಟ ಜನಮಾನಸದಲ್ಲಿ ಎಂದೂ ಅಳಿಸಲಾಗದ ಒಂದು ಹೆಜ್ಜೆ ಗುರುತಾಗಿದೆ.
ಮಹಾತ್ಮ ಗಾಂಧಿ ಅಥವಾ ಬಾಪು ಎಂದು ಪ್ರೀತಿಯಿಂದ ಕರೆಯಲ್ಪಡುವ ಮೋಹನ್‌ದಾಸ್ ಕರಮಚಂದ್ ಗಾಂಧಿ, ಭಾರತದ ಪ್ರಮುಖ ರಾಜಕೀಯ ಮತ್ತು ಅಧ್ಯಾತ್ಮಿಕ ನಾಯಕ. ಅಸಹಕಾರ ಚಳವಳಿ, ದಂಡಿ ಮಾರ್ಚ್ ಮತ್ತು ಕ್ವಿಟ್ ಇಂಡಿಯಾ ಚಳವಳಿಯಂತಹ ಪ್ರಮುಖ ಚಳವಳಿಗಳನ್ನು ಮುನ್ನಡೆಸಿದ್ದು ಇದೇ ಬಾಪೂಜಿ. ತಮ್ಮ ಶಾಂತಿಯುತ ಹಾಗೂ ಅಹಿಂಸಾತ್ಮಕ ಹೋರಾಟದ ಮೂಲಕ ಮಹಾತ್ಮ ಗಾಂಧಿ ದೇಶದ ಮೂಲೆ ಮೂಲೆಯಲ್ಲಿ ತಮ್ಮ ಪ್ರಭಾವ ವಿಸ್ತರಿಸಿಕೊಂಡರು.
ಇದನ್ನೂ ಓದಿ: ಗಾಂಧಿ ಜಯಂತಿ 2023: 'ಬಾಪು' ನೆನಪು.. ಭಾರತದ ಸ್ವಾತಂತ್ರ್ಯ ಹೋರಾಟದ ಸಂಕೇತ