ಕೊಲ್ಹಾಪುರ (ಮಹಾರಾಷ್ಟ್ರ): ಕೊಲ್ಲಾಪುರದ ಕುವರಿ, ವಿಶ್ವ ದಾಖಲೆಯ ಪರ್ವತಾರೋಹಿ ಅನ್ವಿ ಚೇತನ್ ಘಾಟ್ಗೆ ಮತ್ತೊಮ್ಮೆ ಸಾಧನೆ ಮಾಡಿದ್ದಾರೆ. ಕೇವಲ 3 ವರ್ಷ ಮತ್ತು 5 ತಿಂಗಳ ಈ ಬಾಲಕಿ ಕರ್ನಾಟಕದ ಅತಿ ಎತ್ತರದ ಶಿಖರ ಮುಳ್ಳಯ್ಯನ ಗಿರಿ ಹತ್ತಿ ಇಳಿದಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಶಿಖರ ಏರಿದ ಬಾಲಕಿಯ ಸಾಧನೆ ಮೆಚ್ಚುಗೆ ಗೆಟ್ಟಿಸಿದೆ.
ದೇಶದ ಮೊದಲ, ಕಿರಿಯ ಪರ್ವತಾರೋಹಿ: ಸಮುದ್ರ ಮಟ್ಟದಿಂದ ಮುಳ್ಳಯ್ಯನ ಗಿರಿ ಸುಮಾರು 1930 ಮೀ. ಎತ್ತರದಲ್ಲಿದೆ. 3-4 ಕಿ.ಮೀ ಇರುವ ಈ ಶಿಖರವೇರಲು ಸುಮಾರು 3 ಗಂಟೆ ಬೇಕು. ಚಾರಣದ ಆರಂಭಿಕ ಭಾಗ 60 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು ಇಳಿಜಾರಾಗಿದೆ. ಆರೋಹಣವು ತುಂಬಾ ಕಷ್ಟಕರವಾಗಿದೆ. ಕಠಿಣವಾದ ಚಾರಣವು ಆರಂಭದಲ್ಲಿ ಪೊದೆಗಳು ಮತ್ತು ದಟ್ಟವಾದ ಮರಗಳಿಂದ ಆವೃತವಾಗಿದೆ. ಬಿರು ಬಿಸಿಲಿನಲ್ಲಿ ಮತ್ತು ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಅನ್ವಿ ಕೇವಲ ಎರಡೂವರೆ ಗಂಟೆಗಳಲ್ಲಿ ಚಾರಣವನ್ನು ಪೂರ್ಣಗೊಳಿಸಿದರು. ಈ ಮೂಲಕ ಅನ್ವಿ ಘಾಟ್ಗೆ ಕರ್ನಾಟಕದ ಅತಿ ಎತ್ತರದ ಶಿಖರ ಮುಳ್ಳಯ್ಯನಗಿರಿ ಏರಿದ ದೇಶದ ಮೊದಲ ಮತ್ತು ಕಿರಿಯ ಪರ್ವತಾರೋಹಿ ಎನಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕದ ಅರಣ್ಯ ಸಂರಕ್ಷಣಾಧಿಕಾರಿಗಳು ಆಕೆಯನ್ನು ಅಭಿನಂದಿಸಿ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ.
ಅನ್ವಿ ಚೇತನ್ ಘಾಟ್ಗೆ ಈ ಸಾಧನೆಗಾಗಿ ತನ್ನ ತಾಯಿ ಅನಿತಾ ಮತ್ತು ತಂದೆ ಚೇತನ್ ಘಾಟ್ಗೆ ಅವರೊಂದಿಗೆ ಜನವರಿ 11, 2023 ರಂದು ಕೊಲ್ಲಾಪುರ ತೊರೆದಿದ್ದರು. ಜನವರಿ 12, 2023 ರಂದು, ಚಿಕ್ಕಮಗಳೂರು ಅರಣ್ಯ ವಿಭಾಗದಲ್ಲಿ ಪೋಷಕರು ಹಾಗು ಚಿಕ್ಕಪ್ಪ ರೋಹನ್ ಮಾನೆ, ಹರ್ಷದಾ ಮಾನೆ, ಅರಣ್ಯ ಸಿಬ್ಬಂದಿ ಉಮೇಶ್ ಅವರೊಂದಿಗೆ ಅನ್ವಿ ಮಧ್ಯಾಹ್ನ ಮುಳ್ಳಯ್ಯನ ಗಿರಿ ಶಿಖರದ ತಳದಲ್ಲಿರುವ ಸರ್ಪದರಿಯಿಂದ ಚಾರಣ ಪ್ರಾರಂಭಿಸಿದ್ದರು.
ಉತ್ಸಾಹಿ ಪರ್ವತಾರೋಹಿ: ಕಲ್ಸುಬಾಯಿಯನ್ನು ಮಹಾರಾಷ್ಟ್ರದ ಎವರೆಸ್ಟ್ ಎಂದು ಕರೆಯಲಾಗುತ್ತದೆ. ಕುಮಾರಿ ಅನ್ವಿ 2 ವರ್ಷ 11 ತಿಂಗಳ ವಯಸ್ಸಿನಲ್ಲಿ ಮಹಾರಾಷ್ಟ್ರದ ಅತಿ ಎತ್ತರದ ಈ ಶಿಖರ ಏರಿದ್ದಾರೆ. ಈ ಸಾಧನೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಿಸಲಾಗಿದೆ. ಇತ್ತೀಚೆಗೆ ಆಕೆಗೆ ವಿಶ್ವ ದಾಖಲೆ ಸಮಿತಿ 'ಉತ್ಸಾಹಿ ಪರ್ವತಾರೋಹಿ' ಎಂಬ ಬಿರುದು ನೀಡಿ ಗೌರವಿಸಿದೆ. ಅಲ್ಲದೇ ಈಕೆ ಪನ್ಹಾಲ್ಗಡ್ ಕೋಟೆ, ಪವನ್ಗಡ್ ಕೋಟೆ, ವಿಶಾಲ್ಗಡ್ ಕೋಟೆ, ಶಿವಗಡ್ ಕೋಟೆ, ಸಮಂಗಡ್ ಕೋಟೆ, ಪರ್ಗಡ್ ಕೋಟೆ, ರಂಗನ ಕೋಟೆ, ವಲ್ಲಭಗಡ ಕೋಟೆ ಮತ್ತು ವಸೋತ ಕೋಟೆಗಳಂತಹ ಅನೇಕ ಕೋಟೆಗಳನ್ನು ಏರಿಳಿದಿದ್ದಾಳೆ. ಈ ಕೋಟೆಗಳು ಅತ್ಯಂತ ಕಠಿಣ ಮತ್ತು ಕಷ್ಟಕರವೆಂದು ಪರಿಗಣಿಸಲ್ಪಟ್ಟಿವೆ.
ಇದನ್ನೂ ಓದಿ: ಮೌಂಟ್ ಎವರೆಸ್ಟ್ ಶಿಖರ ಏರುವ ಅನ್ವಿತಾ ಕನಸು ಈಡೇರಿದ್ದು ಹೇಗೆ?.. ಇಲ್ಲಿದೆ ರೆಡ್ಡಿ ಸಾಧನೆಯ ಶಿಖರ