ಗುಂಟೂರು (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಕಾರ್ಯಕ್ರಮದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಗುಂಟೂರು ಜಿಲ್ಲೆಯಲ್ಲಿ ಟಿಡಿಪಿ ವತಿಯಿಂದ ಬಡವರಿಗೆ ಸಂಕ್ರಾಂತಿ ನಿಮಿತ್ತ ಚಂದ್ರಣ್ಣ ಉಡುಗೊರೆ ವಿತರಣೆ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ ಮೂವರು ಮಹಿಳೆಯರು ಮೃತಪಟ್ಟು, ಇನ್ನೂ ಕೆಲವರು ಗಾಯಗೊಂಡಿದ್ದಾರೆ.
ನೆಲ್ಲೂರು ಜಿಲ್ಲೆಯ ಕುಂದುಕೂರು ಪಟ್ಟಣದಲ್ಲಿ ಡಿಸೆಂಬರ್ 28ರಂದು ಚಂದ್ರಬಾಬು ನಾಯ್ಡು ಅವರ ರೋಡ್ ಶೋ ವೇಳೆ ನಡೆದ ಕಾಲ್ತುಳಿತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು. ಇದಾದ ಒಂದೇ ವಾರದೊಳಗೆ ಈ ಎರಡನೇ ದುರ್ಘಟನೆ ಜರುಗಿದೆ. ಉಡುಗೊರೆ ಸ್ವೀಕರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸರತಿ ಸಾಲಿನಲ್ಲಿ ನಿಂತಿದ್ದರು. ಕೆಲವು ಮಹಿಳೆಯರು ಸರತಿ ಸಾಲು ಮುರಿದು ಮುಂದೆ ಸಾಗಲು ಯತ್ನಿಸಿದ ಪರಿಣಾಮ ನೂಕುನುಗ್ಗಲು ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಲ್ಲದೇ, ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನು ಗುಂಟೂರು ಜಿಜಿಎಚ್ ಆಸ್ಪತ್ರೆ ಹಾಗೂ ಇನ್ನಿಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜನರು ವೇದಿಕೆಯತ್ತ ನುಗ್ಗಿದ್ದರಿಂದ ಟಿಡಿಪಿ ಮುಖಂಡರು ಮತ್ತು ಕಾರ್ಯಕರ್ತರಿಗೂ ಕೂಡ ಜನರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈ ಘಟನೆಯ ನಂತರ ಪೊಲೀಸ್ ಅಧಿಕಾರಿಗಳು ಸಭಾಂಗಣವನ್ನು ತೆರವು ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಗುಂಟೂರು ಡಿಎಸ್‌ಪಿ ಸೀತಾರಾಮಯ್ಯ, ಉಡುಗೊರೆ ವಿತರಣೆಗೆ 24 ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು. ಈ ವೇಳೆ ಮೊದಲ 4 ಕೌಂಟರ್‌ಗಳಲ್ಲಿ ಕಾಲ್ತುಳಿತ ಉಂಟಾಗಿದೆ. ಕಾಲ್ತುಳಿತದಲ್ಲಿ ಕೆಳಗಡೆ ಬಿದ್ದವರನ್ನು ರಕ್ಷಿಸಿದ್ದೇವೆ ಎಂದು ಹೇಳಿದರು.
ಈ ವಿಷಯ ತಿಳಿದು ಗುಂಟೂರು ಜಿಲ್ಲಾಧಿಕಾರಿ ಮತ್ತು ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಗೆ ಸಚಿವೆ ವಿಡದಾಳ ರಜಿನಿ, ಶಾಸಕ ಮುಸ್ತಫಾ, ಎಂಎಲ್‌ಸಿ ಅಪ್ಪಿರೆಡ್ಡಿ, ಟಿಡಿಪಿ ಮುಖಂಡರಾದ ಆಲಪತಿ ರಾಜಾ ಮತ್ತು ನಕ್ಕಾ ಆನಂದಬಾಬು ತೆರಳಿ ಸಂತ್ರಸ್ತರನ್ನು ಭೇಟಿ ಮಾಡಿದರು. ಟಿಡಿಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ಥಳದಿಂದ ನಿರ್ಗಮಿಸಿದ ನಂತರ ಈ ಘಟನೆ ಸಂಭವಿಸಿದೆ.
ಇದನ್ನೂ ಓದಿ: ಚಂದ್ರಬಾಬು ನಾಯ್ಡು ಬಹಿರಂಗ ಸಭೆಯಲ್ಲಿ ಭಾರಿ ದುರಂತ: ಕಾಲ್ತುಳಿತಕ್ಕೆ 8 ಜನರು ಸಾವು