ಕಿಯೋಂಜಾರ್ (ಒಡಿಶಾ): ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕೋಚಿಂಗ್ ಸೆಂಟರ್ನ ಹಾಸ್ಟೆಲ್‌ವೊಂದರಲ್ಲಿ ವಿಷಪೂರಿತ ಹಾವು ಕಚ್ಚಿ ಇಬ್ಬರು ಬಾಲಕಿಯರು ಸೇರಿದಂತೆ ಮೂವರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮತ್ತೋರ್ವ ವಿದ್ಯಾರ್ಥಿ ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಲ್ಲಿನ ಚಂಪೂವಾ ಬ್ಲಾಕ್ ನಿಶ್ಚಿಂತಪುರ ಗ್ರಾಮದ ಕೋಚಿಂಗ್ ಸೆಂಟರ್ನ ಹಾಸ್ಟೆಲ್‌ನಲ್ಲಿ ಈ ದುರ್ಘಟನೆ ಜರುಗಿದೆ. ಮೃತ ವಿದ್ಯಾರ್ಥಿಗಳನ್ನು ರಾಜಾ ನಾಯಕ್ (12), ಶೇಹಶ್ರೀ ನಾಯಕ್ (10) ಮತ್ತು ಎಲಿನಾ ನಾಯಕ್ (7) ಎಂದು ಗುರುತಿಸಲಾಗಿದೆ. ಮತ್ತೊಬ್ಬ ವಿದ್ಯಾರ್ಥಿ ಆಕಾಶ್ ನಾಯಕ್ (12) ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಆಕಾಶ್ನನ್ನು ರವಾನಿಸಲಾಗಿದೆ.
ಫಟಾಫಟ್ ಕೋಚಿಂಗ್ ಸೆಂಟರ್ ಎಂಬ ಹೆಸರಿನ ಹಾಸ್ಟೆಲ್ ಇದಾಗಿದೆ. ಈ ಕೋಚಿಂಗ್ ಸೆಂಟರ್ಅನ್ನು ಖಗೇಸ್ವರ್ ಮೊಹಂತ ಎಂಬುವವರು ನಡೆಸುತ್ತಿದ್ದಾರೆ. ಶನಿವಾರ ರಾತ್ರಿ ಹಾಸ್ಟೆಲ್‌ನಲ್ಲಿ ಮಲಗಿದ್ದಾಗ ವಿಷಪೂರಿತ ಹಾವು ಕಚ್ಚಿದೆ. ಎಲ್ಲ ನಾಲ್ವರು ವಿದ್ಯಾರ್ಥಿಗಳು ನೆಲದ ಮೇಲೆ ಮಲಗಿದ್ದರು. ಈ ವೇಳೆ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳು ಹಾವು ಕಡಿತಕ್ಕೆ ಒಳಗಾಗಿದ್ದಾರೆ.
ಆಗ ತಕ್ಷಣವೇ ನಾಲ್ವರು ವಿದ್ಯಾರ್ಥಿಗಳನ್ನೂ ಕಿಯೋಂಜಾರ್‌ನಲ್ಲಿರುವ ಜಿಲ್ಲಾ ಪ್ರಧಾನ ಆಸ್ಪತ್ರೆ (ಡಿಹೆಚ್ಹೆಸ್)ಗೆ ಸಾಗಿಸಲಾಗಿದೆ. ಅಷ್ಟರಲ್ಲೇ, ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಬಗ್ಗೆ ಪೊಲೀಸರು ಮತ್ತು ಕೋಚಿಂಗ್ ಸೆಂಟರ್ನ ಆಡಳಿತ ಮಂಡಳಿ ಇನ್ನೂ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ: ಹೊಸ ಯುವಕನೊಂದಿಗೆ ಚಿಗುರಿದ ಪ್ರೀತಿ.. ಹಳೆ ಪ್ರಿಯಕರನಿಗೆ ನಾಗರಹಾವಿನಿಂದ ಕಚ್ಚಿಸಿದ ಪ್ರೇಯಸಿ!
ಇತ್ತೀಚೆಗೆ ಬೆಳಗಾವಿ ಜಿಲ್ಲೆಯಲ್ಲಿ ಮನೆಯೊಂದರಲ್ಲಿ ಮಲಗಿದ್ದ ದಂಪತಿಗೆ ಹಾವು ಕಚ್ಚಿದ ಘಟನೆ ನಡೆದಿತ್ತು. ಈ ಘಟನೆಯಲ್ಲಿ ಸಿದ್ದಪ್ಪ ಚಿವಟಗುಂಡಿ (35) ಎಂಬುವರು ಮೃತಪಟ್ಟಿದ್ದರು. ಪತ್ನಿ ನಾಗವ್ವ (28) ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿದ್ದರು. ಅನ್ನಪೂರ್ಣೇಶ್ವರಿ ನಗರದ ನಿವಾಸಿಗಳಾದ ನಾಗವ್ವ ದಂಪತಿ ತಮ್ಮ ಮೂರು ಮಕ್ಕಳ ಸಮೇತ ರಾತ್ರಿ ಊಟ ಮಾಡಿ ಮಲಗಿದ್ದರು.
ಬೆಳಗಿನ ಜಾವ ನಿದ್ದೆಯಲ್ಲಿದ್ದಾಗ ನಾಗವ್ವ ಹಾಗೂ ಸಿದ್ದಪ್ಪನಿಗೆ ಹಾವು ಕಚ್ಚಿತ್ತು. ನಂತರ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಿದ್ದಪ್ಪ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು. ಬೈಲಹೊಂಗಲ ತಾಲೂಕಿನ ಸಾಣಿಕೊಪ್ಪ ಗ್ರಾಮದ ಸಿದ್ದಪ್ಪ ಮತ್ತು ನಾಗವ್ವ ದಂಪತಿ ಹೊಟ್ಟೆಪಾಡಿಗಾಗಿ ಸಾಣಿಕೊಪ್ಪದಿಂದ ಬೆಳಗಾವಿಗೆ ಬಂದು ನೆಲೆಸಿದ್ದರು. ಮೃತ ಸಿದ್ದಪ್ಪವಡಗಾವಿಯ ಕಟ್ಟಡ ಕಾಮಗಾರಿಯೊಂದರಲ್ಲಿ ವಾಚ್‍ಮನ್ ಆಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: Snake bites a couple: ಮನೆಯಲ್ಲಿ ಮಲಗಿದ್ದ ದಂಪತಿಗೆ ಕಚ್ಚಿದ ನಾಗರಹಾವು - ಪತಿ ಸಾವು, ಪತ್ನಿ ಸ್ಥಿತಿ ಗಂಭೀರ