ಸೆರೆಕೇಲಾ: ಜಿಲ್ಲೆಯ ಆದಿತ್ಯಪುರದಲ್ಲಿ ನಡೆದ ತ್ರಿವಳಿ ಕೊಲೆಯಿಂದ ಆತಂಕ ಮನೆ ಮಾಡಿದೆ. ಮೂವರನ್ನು ಗುಂಡಿಕ್ಕಿ ಕೊಂದಿರುವ ಘಟನೆ ತಡರಾತ್ರಿ ನಡೆದಿದ್ದು, ಘಟನೆಯ ನಂತರ ಇಡೀ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮೃತರು ಆಶಿಶ್ ಗೊರೈ, ರಾಜು ಗೊರೈ ಮತ್ತು ಸುಬೀರ್ ಚಟರ್ಜಿ ಎಂದು ಗುರುತಿಸಲಾಗಿದೆ. ಕ್ರಿಮಿನಲ್‌ಗಳಾದ ಶೇರು ಮತ್ತು ಛೋಟು ಯಾದವ್ ಮೇಲೆ ಕೊಲೆ ಶಂಕೆ ವ್ಯಕ್ತವಾಗುತ್ತಿದೆ.
ಗ್ಯಾಂಗ್ ವಾರ್: ಇದೊಂದು ಗ್ಯಾಂಗ್ವಾರ್ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಸ್ಪಿ ಆನಂದ್ ಪ್ರಕಾಶ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಛೋಟು ಯಾದವ್ ಹೆಸರು ಹೊರ ಬರುತ್ತಿದೆ. ಛೋಟು ತನ್ನ ಸಹಚರ ಶೇರು ಜೊತೆ ಸೇರಿ ಸುಬೀರ್ ಚಟರ್ಜಿ, ಆಶಿಶ್ ಗೊರೈ ಮತ್ತು ರಾಜು ಗೊರೈರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಘಟನೆ ಬಗ್ಗೆ ಮಾಹಿತಿ ಪಡೆದ ಎಸ್‌ಡಿಪಿಒ ಹರ್ವಿಂದರ್ ಸಿಂಗ್ ಕೂಡ ಟಿಎಂಎಚ್ ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣದ ವಿವರಣೆ ಕೇಳಿದ್ದಾರೆ. ಈ ಗುಂಡಿನ ದಾಳಿ ವೇಳೆ ಮೃತ ರಾಜು ಗೊರೈ ಅವರ ಸಹೋದರ ಕಿಶನ್ ಗೋರೈ ಕೂಡ ಸ್ಥಳದಲ್ಲಿ ಹಾಜರಿದ್ದರು ಎನ್ನಲಾಗ್ತಿದೆ.
ಓದಿ: ಹೊಟ್ಟೆಯಿಂದ ಕೆಳಭಾಗ ಕತ್ತರಿಸಿದ ಇಬ್ಬರು ಮಹಿಳೆಯರ ಶವ ಪತ್ತೆ: ಬೆಚ್ಚಿಬಿದ್ದ ಸಕ್ಕರೆನಾಡಿನ ಜನತೆ
ಕಿಶನ್ ಹೇಳಿದ್ದೇನು?: ನಗರದ ಸತ್ಬಹಾನಿ ಮೈದಾನದಲ್ಲಿ ಪಾರ್ಟಿ ಮಾಡುತ್ತಿದ್ದೆವು. ಆಗ ಛೋಟು ಯಾದವ್, ಶೇರು ತಮ್ಮ ಇತರ ಸಹಚರರೊಂದಿಗೆ ಹೊಸ ಬೊಲೆರೊದಲ್ಲಿ ಬಂದರು. ಎಲ್ಲರ ಬಳಿ ಬಂದೂಕುಗಳಿದ್ದವು. ತಲೆಗೆ ಗುರಿಯಿಟ್ಟು ಆಶಿಶ್ನನ್ನು ಕರೆದೊಯ್ಯುತ್ತಿದ್ದರು. ಅಷ್ಟರಲ್ಲಿ ಆತನನ್ನು ರಕ್ಷಿಸಲು ರಾಜು ಮತ್ತು ಸುಬೀರ್ ಅಡ್ಡ ಬಂದರು.
ಈ ವೇಳೆ ಛೋಟು ಮೊದಲು ಆಶಿಶ್, ನಂತರ ರಾಜು ಮತ್ತು ಸುಬೀರ್‌ಗೆ ಗುಂಡು ಹಾರಿಸಿದ್ದಾನೆ. ಅಷ್ಟರಲ್ಲಿ ಆತನೊಂದಿಗೆ ಬಂದ ಇತರರೂ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಘಟನೆ ಬಳಿಕ ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಎರಡು ದಿನಗಳ ಹಿಂದೆ ಛೋಟು ಮತ್ತು ಆಶಿಶ್ ನಡುವೆ ಜಗಳವಾಗಿತ್ತು ಎಂದು ಕಿಶನ್ ಹೇಳಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.