ವಿಕಾರಾಬಾದ್: ಸಂಬಂಧಿಕರೊಬ್ಬರ ಮನೆಯಲ್ಲಿ ನಡೆದ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ಸಂದಂರ್ಭದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆ ಪೂಡೂರಿನಲ್ಲಿ ಸಂಭವಿಸಿದೆ.
ವಿಕಾರಾಬಾದ್ನ ಬಿಟಿಎಸ್ ಕಾಲೋನಿ ನಿವಾಸಿ ಎರ್ರಪಲ್ಲಿ ಸಂತೋಷ್ರೆಡ್ಡಿ, ಹೆಂಡ್ತಿ ಸ್ವಾತಿ ಸಾಫ್ಟ್ವೇರ್ ಉದ್ಯೋಗಸ್ಥರು. ಸಂತೋಷ್ ರೆಡ್ಡಿ ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಿದ್ದು, ಸಂತೋಷ್ ಪತ್ನಿ ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿದ್ದಾರೆ.
ಸಮೀಪದ ಬಂಧುಗಳ ಕಾರ್ಯಕ್ರಮವೊಂದಕ್ಕೆ ಹಾಜರಾಗಲು ಕಾರಿನಲ್ಲಿ ಸಂತೋಷ್ ರೆಡ್ಡಿ, ಆತನ ತಂದೆ ಮಲ್ಲಿಕಾರ್ಜುನ್ ರೆಡ್ಡಿ (61), ತಾಯಿ ರಾಜಲಕ್ಷ್ಮಿ ಮತ್ತು ಮಗ ದೇವಾನ್ಷ್ ರೆಡ್ಡಿ (6) ಸೇರಿ ವಿಕಾರಾಬಾದ್ಗೆ ಭಾನುವಾರ ತೆರಳಿದ್ದು. ಭಾನುವಾರ ತಡರಾತ್ರಿಯವರೆಗೆ ಕಾರ್ಯಕ್ರಮ ನಡೆದ ಹಿನ್ನೆಲೆ ಅವರು ಸೋಮವಾರ ಬೆಳಗ್ಗೆ 7 ಗಂಟೆಗೆ ವಿಕಾರಾಬಾದ್ನಿಂದ ತಮ್ಮ ಊರಿನತ್ತ ಪ್ರಯಾಣ ಬೆಳಸಿದ್ದರು.
ಇಲ್ಲಿನ ಕೊಂಡಪಲ್ಲಿ ಗೇಟ್ ದಾಟಿದಾಕ್ಷಣವೇ ಎದುರಿಗೆ ಬಂದ ಕ್ವಾಲಿಸ್ ಕಾರು ನಿಯಂತ್ರಣ ತಪ್ಪಿ ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸಂತೋಷ್ ರೆಡ್ಡಿ ಮಗ ದೇವಾನ್ಷ್ ರೆಡ್ಡಿ, ಸಂತೋಷ್ ರೆಡ್ಡಿ ತಂದೆ ಮಲ್ಲಿಕಾರ್ಜುನ್ ರೆಡ್ಡಿ ಮತ್ತು ಆತನ ತಾಯಿ ರಾಜಲಕ್ಷ್ಮಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಇನ್ನು ಸಂತೋಷ್ ರೆಡ್ಡಿಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.
ಸಂತೋಷ್ ರೆಡ್ಡಿಗೆ ದೇವಾನ್ಷ್ ಒಬ್ಬನೇ ಮಗನಾಗಿದ್ದಾನೆ. ಈ ಅಪಘಾತ ಸಂಭವಿಸಿರುವ ಬಗ್ಗೆ ಸಂತೋಷ್ ರೆಡ್ಡಿ ಪತ್ನಿ ಸ್ವಾತಿಗೆ ಮಾಹಿತಿ ತಿಳಿಸಿದ್ದು, ಅಮೆರಿಕದಿಂದ ಸ್ವಗ್ರಾಮಕ್ಕೆ ಮರಳುತ್ತಿದ್ದಾರೆ. ಈ ಘಟನೆ ಕುರಿತು ಪೂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.