ಅಲಿಗಢ (ಉತ್ತರ ಪ್ರದೇಶ): ಬೀದಿ ನಾಯಿಗಳು ದಾಳಿ ಮಾಡಿ ಮೂರು ತಿಂಗಳ ಹೆಣ್ಣು ಮಗುವನ್ನು ಕೊಂದು ಹಾಕಿದ ಘಟನೆ ಅಲಿಗಢದ ಕ್ವಾರ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಾಪ್ ಕಾಲೋನಿಯಲ್ಲಿ ನಡೆದಿದೆ. ಮನೆಯಲ್ಲಿ ಮಲಗಿಸಿದ್ದ ಮೂರು ತಿಂಗಳ ಕಂದಮ್ಮನನ್ನು ಬೀದಿ ನಾಯಿಗಳು ಮೇಲೆತ್ತಿಕೊಂಡು ಹೋಗಿ ದಾಳಿ ಮಾಡಿವೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಶನಿವಾರ ರಾತ್ರಿ ನಡೆದಿದೆ.
"ಘಟನೆ ನಡೆದ ಮನೆಯಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಅದೇ ಸಮಯದಲ್ಲಿ ಎರಡು ನಾಯಿಗಳು ಮನೆಗೆ ನುಗ್ಗಿದ್ದು, ಮೂರು ತಿಂಗಳ ಹೆಣ್ಣು ಮಗು ಮಲಗಿದ್ದಾಗ ಎಳೆದೊಯ್ದು ಕೊಂದು ಹಾಕಿವೆ. ನಾಯಿಯು ಪುಟ್ಟ ಕಂದಮ್ಮನನ್ನು ಬಾಯಿಯಲ್ಲಿಟ್ಟುಕೊಂಡು ತಿರುಗಾಡುತ್ತಿರುವುದನ್ನು ಸ್ಥಳೀಯರು ನೋಡಿದ್ದಾರೆ. ಬಳಿಕ ಸ್ಥಳೀಯರ ಗಲಾಟೆ ಕೇಳಿ ನಾಯಿ ಮಗುವನ್ನು ಬಿಟ್ಟು ಓಡಿ ಹೋಗಿದೆ" ಎಂದು ಸ್ಥಳೀಯ ಪೊಲೀಸರು ಮಾಹಿತಿ ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಕ್ವಾರ್ಸಿ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿ ಅರವಿಂದ್ ಕುಮಾರ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದಕ್ಕೂ ಮುನ್ನ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಆವರಣದಲ್ಲಿ ಬೀದಿ ನಾಯಿಗಳ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಮೃತರನ್ನು ಠಾಣಾ ಸಿವಿಲ್ ಲೈನ್ ನಿವಾಸಿ ಅಶ್ರಫ್ ಎಂದು ಗುರುತಿಸಲಾಗಿತ್ತು. ಈ ದೃಶ್ಯ ಪಕ್ಕದಲ್ಲೇ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಅಶ್ರಫ್ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನ ಗಾರ್ಡನ್‌ನಲ್ಲಿ ಬೆಳಗಿನ ಜಾವ ವಾಕಿಂಗ್‌ಗೆ ತೆರಳಿದ್ದರು. ಅಲ್ಲಿ ನಾಯಿಗಳು ದಾಳಿ ಮಾಡಿದೆ. ಬಳಿಕ, ಮಾಹಿತಿ ಪಡೆದ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಬೀದಿ ನಾಯಿ ಹಾವಳಿಗೆ ವಾಣಿಜ್ಯ ನಗರಿ ಹುಬ್ಬಳ್ಳಿ ಜನ ತತ್ತರ
ಹಾಗೆಯೇ, ಕಳೆದ ಎರಡು ದಿನಗಳ ಹಿಂದಷ್ಟೇ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿಯೂ ಸಹ ಇಂತಹದೇ ಘಟನೆ ನಡೆದಿತ್ತು. ಸಾತ್ವಿಕಾ ರಾಂಬಾಬು ಮತ್ತು ರಾಮಲಕ್ಷ್ಮಿ ದಂಪತಿಯ 18 ತಿಂಗಳ ಹೆಣ್ಣು ಮಗುವೊಂದು ಬೀದಿ ನಾಯಿಗಳ ದಾಳಿಗೆ ಬಲಿಯಾಗಿತ್ತು. ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಮಗು ಹಾಸಿಗೆಯಲ್ಲಿ ಆಟವಾಡುತ್ತಿತ್ತು. ಆ ವೇಳೆ ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ನಡೆಸಿ, ಹತ್ತಿರದ ತೋಟಕ್ಕೆ ಎಳೆದೊಯ್ದಿವೆ. ಇದು ಪೋಷಕರ ಗಮನಕ್ಕೆ ಬಂದಿರಲಿಲ್ಲ. ಬಳಿಕ, ಮಗುವನ್ನು ಹುಡುಕುತ್ತ ಸಾಗಿದಾಗ ಅಳುವ ಧ್ವನಿ ಕೇಳಿದೆ. ಮನೆಯ ಹತ್ತಿರದ ತೋಟದಲ್ಲಿ ನಾಯಿಗಳು ಮಗುವಿನ ಮೇಲೆ ದಾಳಿ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತಾದರೂ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.
ಇದನ್ನೂ ಓದಿ : ಬೀದಿ ನಾಯಿ ದಾಳಿಗೆ 18 ತಿಂಗಳ ಕಂದಮ್ಮ ಬಲಿ