ಶ್ರೀನಗರ: ಕಾಶ್ಮೀರದಲ್ಲಿ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಮತ್ತೊಂದು ಘಟನೆಯಲ್ಲಿ ನಾಪತ್ತೆಯಾಗಿದ್ದ ಯೋಧನ ಮೃತದೇಹ ಮೂರು ದಿನಗಳ ನಂತರ ದೊರೆತಿದೆ.
ಪುಲ್ವಾಮಾ ಜಿಲ್ಲೆಯ ನೈನಾ ಗ್ರಾಮದಲ್ಲಿ ಮೊದಲ ಎನ್‌ಕೌಂಟರ್ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಎಲ್‌ಇಟಿ ಉಗ್ರರನ್ನು ಹೊಡೆದುರುಳಿಸಲಾಗಿದೆ. ಮತ್ತೊಂದು ಘಟನೆಯಲ್ಲಿ ಪಾಕಿಸ್ತಾನಿ ನಿವಾಸಿಯಾದ ಮತ್ತೊಬ್ಬ ಉಗ್ರನನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಹಜರತ್‌ಬಾಲ್ ದೇಗುಲದ ಕಾವಲು ಕಾಯುತ್ತಿದ್ದ ಪೊಲೀಸರಿಂದ ಶಸ್ತ್ರಾಸ್ತ್ರ ಕಸಿದುಕೊಳ್ಳಲು ಮೂವರು ಉಗ್ರರು ಬಂದಿದ್ದರು. ಆ ವೇಳೆ ಗುಂಡಿನ ಚಕಮಕಿ ನಡೆದಿದ್ದು ಉಗ್ರನನ್ನು ಹೊಡೆದುರುಳಿಸಲಾಯಿತು. ನಂತರ ಉಳಿದ ಮತ್ತಿಬ್ಬರು ಆ ಸ್ಥಳದಿಂದ ಪಲಾಯನ ಮಾಡಿದರು ಎಂದು ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಹೇಳಿದ್ದಾರೆ.
ಇದನ್ನೂ ಓದಿ: ಹತ್ತು ವರ್ಷದಲ್ಲೇ ಬದಲಾದ ಮನ್ ಹಣೆಬರಹ: ಪಂಜಾಬ್ ಸಿಎಂ ಗದ್ದುಗೆ ಏರಲಿದ್ದಾರೆ ಕಾಮಿಡಿಯನ್!
ಉಗ್ರರು ಆಶ್ರಯ ಪಡೆಯಲು ಧಾರ್ಮಿಕ ಸ್ಥಳಗಳನ್ನು ಬಳಸುತ್ತಿದ್ದು, ಈ ಬಗ್ಗೆ ಪೊಲೀಸರು ಸಕ್ರಿಯರಾಗಿದ್ದಾರೆ. ಅಂತಹ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸುತ್ತಿದ್ದಾರೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
ಮತ್ತೊಂದು ಘಟನೆಯಲ್ಲಿ ಲಷ್ಕರ್-ಎ-ತೊಯ್ಬಾದ ಇಬ್ಬರು ಸ್ಥಳೀಯ ಉಗ್ರರು ಮೊದಲು ಪುಲ್ವಾಮಾದ ನೈನಾದಲ್ಲಿರುವ ಮಸೀದಿ ಪ್ರವೇಶಿಸಿದರು. ಆ ವೇಳೆ ನಡೆದ ಆರಂಭಿಕ ಗುಂಡಿನ ಚಕಮಕಿಯ ನಂತರ ಅವರು ಹತ್ತಿರದ ಕಟ್ಟಡದಲ್ಲಿ ಆಶ್ರಯ ಪಡೆದರು. ಆದರೆ ಅವರಿಬ್ಬರನ್ನೂ ಸೇನೆ ಹೊಡೆದಿದೆ ಎಂದು ಮಾಹಿತಿ ನೀಡಿದರು.
ಬುದ್ಗಾಮ್‌ನಲ್ಲಿ ಯೋಧನ ಶವ ಪತ್ತೆಯಾದ ಬಗ್ಗೆ ಐಜಿಪಿ ಮಾಹಿತಿ ನೀಡಿ, ಅವರು ಉಗ್ರಗಾಮಿಗಳಿಂದ ಹತರಾಗಿದ್ದಾರೆಯೇ ಅಥವಾ ಯಾರೊಂದಿಗಾದರೂ ಜಗಳವಾಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಯೋಧ ಸಮೀರ್ ಅಹ್ಮದ್ ಮಲ್ಲಾ ಮೂರು ದಿನಗಳ ಹಿಂದೆ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು. ಮೂರು ದಿನಗಳ ನಂತರ ಇಂದು ಅವರ ಮೃತದೇಹ ಪತ್ತೆಯಾಗಿದೆ. ಮಲ್ಲಾ ಅವರು ಮೇಜರ್ ಲೀತುಲ್ ಗೊಗೊಯ್ ಅವರ ಚಾಲಕರಾಗಿದ್ದರು.