ಬಂಡಿಪೋರಾ, ಕಾಶ್ಮೀರ: ಕಾಶ್ಮೀರದ ಬಂಡಿಪೋರಾದಲ್ಲಿ ಬೇರೆಡೆಯಿಂದ ಬಂದಿದ್ದ ಕಾರ್ಮಿಕನನ್ನು ಗುಂಡಿಕ್ಕಿ ಕೊಂದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಉಗ್ರರನ್ನು ಹೆಡೆಮುರಿ ಕಟ್ಟಲಾಗಿದೆ.
ಆಗಸ್ಟ್ 12 ರಂದು ರಾತ್ರಿ ವೇಳೆ ಬಿಹಾರದ ಮುಹಮ್ಮದ್ ಅಮ್ರೇಜ್ ಎಂಬ ಕಾರ್ಮಿಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆಯ ವೇಳೆ ಭಾಗವಾಗಿ ಶಂಕಿತರನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು. ಅಂತಿಮವಾಗಿ ಮೂವರು ಸ್ಥಳೀಯ ಉಗ್ರರು ಕಾರ್ಮಿಕರನ್ನು ಹತ್ಯೆ ಮಾಡಿರುವುದನ್ನು ಪತ್ತೆ ಮಾಡಲಾಗಿದ್ದು ಮೂವರನ್ನೂ ಬಂಧಿಸಲಾಗಿದೆ.
ವಸೀಮ್ ಅಕ್ರಮ್, ಯಾರ್ ರಿಯಾಜ್ ಮತ್ತು ಮುಜಾಮಿಲ್ ಶೇಖ್ ಬಂಧಿತ ಆರೋಪಿಗಳು. ಎಲ್ಲರೂ ಸೌದನಾರಾ ಸೋನಾವಾರಿಯ ನಿವಾಸಿಗಳಾಗಿದ್ದು, ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾದ ಉಗ್ರ ಬಾಬರ್‌ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಕಾಶ್ಮೀರದವರಲ್ಲದ ಕಾರ್ಮಿಕರನ್ನು ಇಲ್ಲಿ ಬಂದು ನೆಲೆಸಿದ್ದರೆ, ಅವರನ್ನು ಕೊಲ್ಲಲು ಬಾಬರ್ ಆದೇಶಿಸಿದ್ದ. ಆತನ ಸೂಚನೆಯಂತೆ ನಾವು ಕಾರ್ಮಿಕನನ್ನು ಹತ್ಯೆ ಮಾಡಿದ್ದೆವು ಎಂದು ಕೊಲೆಗಡುಕರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ತನಿಖೆಯ ವೇಳೆ ಉಗ್ರರಿಂದ ಪಿಸ್ತೂಲ್ ಮತ್ತು ಮ್ಯಾಗಜೀನ್ ಮತ್ತು ನಾಲ್ಕು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಓದಿ: ಹುಲಿ ಸೆರೆಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ: ಭಯದಲ್ಲೇ ಬದುಕುತ್ತಿರುವ ಕೊಡಗಿನ ಜನರು