ರೇಣಿಗುಂಟ(ಆಂಧ್ರಪ್ರದೇಶ): ತಿರುಪತಿ ಜಿಲ್ಲೆಯ ರೇಣಿಗುಂಟದ ಖಾಸಗಿ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ವೈದ್ಯ ಹಾಗೂ ಅವರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ವೈದ್ಯ ರವಿಶಂಕರ ರೆಡ್ಡಿ ಹಾಗೂ ಅವರ ಮಕ್ಕಳಾದ ಭರತ್ (12) ಮತ್ತು ಮಗಳು ಕಾರ್ತಿಕಾ (15) ಮೃತರು.
ಪ್ರಕರಣದ ವಿವರ: ಪಟ್ಟಣದ ಭಗತ್ ಸಿಂಗ್ ಕಾಲೋನಿಯಲ್ಲಿನ ಆಸ್ಪತ್ರೆಯನ್ನು ಡಾ.ರವಿಶಂಕರ ರೆಡ್ಡಿ ಕಾರ್ತಿಕೇಯ ಅವರು ಆಸ್ಪತ್ರೆ ನಡೆಸುತ್ತಿದ್ದರು. ಆಸ್ಪತ್ರೆ ಕಟ್ಟಡದ ಮೇಲಿನ ಮಹಡಿಯಲ್ಲಿ ಅವರ ಕುಟುಂಬ ವಾಸವಾಗಿತ್ತು. ಇಂದು ಬೆಳಗ್ಗೆ ವೈದ್ಯರ ಕುಟುಂಬ ವಾಸವಿದ್ದ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಒಮ್ಮೆಲೆ ಎಲ್ಲಾ ಕಡೆ ಬೆಂಕಿ ವ್ಯಾಪಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ವೈದ್ಯ ರವಿಶಂಕರ ರೆಡ್ಡಿ ಸಜೀವ ದಹನವಾಗಿದ್ದಾರೆ. ಉಳಿದಂತೆ ರೆಡ್ಡಿ ಅವರ ಇಬ್ಬರು ಮಕ್ಕಳು ತೀವ್ರ ಅಸ್ವಸ್ಥರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬೆಂಕಿಯ ಜೊತೆಗೆ ಹೆಚ್ಚಿನ ಪ್ರಮಾಣದ ಹೊಗೆ ಬರುತ್ತಿದ್ದರಿಂದ ಮನೆಯಲ್ಲಿದ್ದವರು ತೀವ್ರ ಅಸ್ವಸ್ಥರಾಗಿದ್ದರು. ಮಾಹಿತಿ ತಿಳಿದ ತಿರುಪತಿ ಅಗ್ನಿಶಾಮಕ ದಳ ಸಿಬ್ಬಂದಿ ವೈದ್ಯ ರವಿಶಂಕರ ರೆಡ್ಡಿ ಅವರ ಪತ್ನಿ ಹಾಗೂ ಚಿಕ್ಕಮ್ಮನನ್ನು ರಕ್ಷಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ.. ಐವರು ರೈಲ್ವೆ ಉದ್ಯೋಗಿಗಳ ದುರ್ಮರಣ