ಇಂಫಾಲ್ (ಮಣಿಪುರ): ಈಶಾನ್ಯ ರಾಜ್ಯ ಮಣಿಪುರದಲ್ಲಿ ಹೊಸದಾಗಿ ಮತ್ತೆ ಹಿಂಸಾಚಾರ ನಡೆದಿದೆ. ಮಂಗಳವಾರ ಬೆಳಗ್ಗೆ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಆದಿವಾಸಿ ಜನಾಂಗದ ಮೂವರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬುಡಕಟ್ಟು ಜನಾಂಗದ ಪ್ರಾಬಲ್ಯದ ಕಂಗ್ಗುಯಿ ಪ್ರದೇಶದ ಇರೆಂಗ್ ಮತ್ತು ಕರಮ್ ವೈಫೇಯ್ ಗ್ರಾಮಗಳ ನಡುವೆ ಹೊಂಚು ಹಾಕಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂವರ ಹತ್ಯೆಯ ಘಟನೆಯನ್ನು ಸಾಮಾಜಿಕ ಸಂಘಟನೆಯಾದ ಬುಡಕಟ್ಟು ಏಕತೆಯ ಸಮಿತಿ ತೀವ್ರವಾಗಿ ಖಂಡಿಸಿದೆ. "ಕೇಂದ್ರ ಸರ್ಕಾರವು ರಾಜ್ಯದಲ್ಲಿ ಸಹಜ ಸ್ಥಿತಿಯ ಮರುಸ್ಥಾಪನೆಗೆ ತನ್ನ ಮನವಿಯನ್ನು ಗಂಭೀರವಾಗಿ ಪರಿಗಣಿಸಿದರೆ, ತಕ್ಷಣವೇ ಎಲ್ಲ ಕಣಿವೆ ಜಿಲ್ಲೆಗಳನ್ನು ತೊಂದರೆಗೀಡಾದ ಪ್ರದೇಶಗಳೆಂದು ಘೋಷಿಸಬೇಕು. ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ-1958 ಅನ್ನು ಹೇರಬೇಕು ಎಂದು ಸಮಿತಿ ಹೇಳಿದೆ.
ಇದೇ ಸೆಪ್ಟೆಂಬರ್ 8ರಂದು ತೆಂಗ್ನೌಪಾಲ್ ಜಿಲ್ಲೆಯ ಪಲ್ಲೆಲ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದ್ದರು. ಅಲ್ಲದೇ, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಮೂವರು ಆದಿವಾಸಿಗಳು ಹತ್ಯೆಗೀಡಾಗಿದ್ದಾರೆ. ಮೇ 3ರಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಇದರಲ್ಲಿ ಇದುವರೆಗೆ 180ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: Manipur violence: ಮಣಿಪುರದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ.. ಮನೆಗಳಿಗೆ ಬೆಂಕಿ, ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರ ಲೂಟಿ
ಪರಿಶಿಷ್ಟ ಪಂಗಡದ ಸ್ಥಾನಮಾನ ವಿಷಯವಾಗಿ ಮೈತೇಯಿ ಹಾಗೂ ಬುಡಕಟ್ಟಿನ ಕುಕಿ ಸಮುದಾಯಗಳ ನಡುವೆ ಸಂಘರ್ಷ ಭುಗಿಲೆದ್ದಿದೆ. ಮೇ 3ರಂದು ಬಹುಸಂಖ್ಯಾತ ಮೈತೇಯಿ ಸಮುದಾಯದ ಬೇಡಿಕೆ ವಿರೋಧಿಸಿ ಕುಕಿ ಸಮುದಾಯವು ಬುಡಕಟ್ಟು ಐಕ್ಯತಾ ಮೆರವಣಿಗೆ ನಡೆಸಿತ್ತು. ಈ ವೇಳೆ, ಎರಡೂ ಸಮುದಾಯಗಳ ನಡುವೆ ಹಿಂಸಾಚಾರ ಉಂಟಾಗಿತ್ತು.
ಮಣಿಪುರದ ಜನಸಂಖ್ಯೆಯ ಸುಮಾರು ಶೇ.53ರಷ್ಟಿರುವ ಮೈತೇಯಿಗಳು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಬುಡಕಟ್ಟು ಜನಾಂಗದವರು ಶೇ.40ರಷ್ಟಿದ್ದಾರೆ. ಈ ಸಮುದಾಯಗಳು ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿವೆ. ಹಿಂಸಾಚಾರದಲ್ಲಿ ನೂರಾರು ಮನೆಗಳಿಗೆ ಬೆಂಕಿ ಹಚ್ಚುವಂತಹ ಹಿಂಸಾತ್ಮಕ ಘಟನೆಗಳು ನಡೆದಿವೆ. ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ಬೇರೆಡೆ ಆಶ್ರಯ ಪಡೆಯುವಂತೆ ಆಗಿದೆ.
ರಾಜ್ಯಾದ್ಯಂತ ಪರಿಸ್ಥಿತಿ ಶಾಂತಗೊಳಿಸಲು ನಿಷೇಧಾಜ್ಞೆ ಹಾಗೂ ಕರ್ಫ್ಯೂ ಜಾರಿ ಮಾಡಲಾಗಿದೆ. ಸಂಘರ್ಷಗಳಲ್ಲಿ ತೊಡಗಿರುವ ಉದ್ರಿಕ್ತರು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿರುವ ಕುರಿತು ವರದಿಯಾಗಿದೆ. ಮಣಿಪುರದ ವಿವಿಧ ಜಿಲ್ಲೆಗಳಲ್ಲಿ ಬೆಟ್ಟಗಳು ಮತ್ತು ಕಣಿವೆಗಳಲ್ಲಿ ಒಟ್ಟು 130 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ನಿಗಾ ವಹಿಸಲಾಗಿದೆ. ಕಾನೂನು ಉಲ್ಲಂಘನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 1,646 ಜನರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ಎರಡು ಗುಂಪುಗಳ ನಡುವೆ ಗುಂಡಿನ ದಾಳಿ.. 72 ಗಂಟೆಯಲ್ಲಿ 8 ಸಾವು, 18 ಜನರಿಗೆ ಗಾಯ!