ಹೊಸದಿಲ್ಲಿ: ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ (ಎನ್‌ಎಸ್‌ಎಬಿ) ಮಾಜಿ ಮುಖ್ಯಸ್ಥ ಪಿ.ಎಸ್. ರಾಘವನ್, ಪತ್ರಕರ್ತ ಸಯೀದ್ ನಕ್ವಿ ಮತ್ತು ಟೆಲಿಕಾಂ ಆವಿಷ್ಕಾರಕ ಸ್ಯಾಮ್ ಪಿತ್ರೋಡಾ ಈ ಮೂವರು ಭಾರತೀಯರನ್ನು ರಷ್ಯಾ ಪರವಾದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಆರೋಪಿಗಳ ಪಟ್ಟಿಗೆ ಉಕ್ರೇನ್ ಸೇರಿಸಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಚನೆ ಮಾಡಿರುವ ಸಮಿತಿ ಈ ಕ್ರಮ ಕೈಗೊಂಡಿದೆ.
ವರದಿಗಳ ಪ್ರಕಾರ, ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿಯ ಅಂಗಸಂಸ್ಥೆಯಾದ ಸೆಂಟರ್ ಫಾರ್ ಕೌಂಟರ್ ಡಿಸ್‌ಇನ್‌ಫರ್ಮೇಷನ್ (ಸಿಸಿಡಿ) ಜುಲೈ 14 ರಂದು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮೂವರು ವ್ಯಕ್ತಿಗಳನ್ನು ಹೆಸರಿಸಲಾಗಿದೆ. ಪಟ್ಟಿಯಲ್ಲಿ ಹೆಸರು ಸೇರ್ಪಡೆಯ ಮಾನದಂಡಗಳು ಅಸ್ಪಷ್ಟವಾಗಿದ್ದರೂ, ವರದಿಯಲ್ಲಿನ ಪ್ರತಿಯೊಂದು ಹೆಸರಿಗೆ "ಪ್ರೊ-ರಷ್ಯನ್" (ರಷ್ಯಾ ಪರವಾದ) ಎಂದು ಟ್ಯಾಗ್ ಸೇರಿಸಲಾಗಿದೆ.
ರಾಷ್ಟ್ರಾಧ್ಯಕ್ಷರ ಆದೇಶದ ಮೇರೆಗೆ ಕಳೆದ ವರ್ಷ ಸಿಸಿಡಿಯನ್ನು ಸ್ಥಾಪಿಸಲಾಗಿತ್ತು ಹಾಗೂ ಮಾಜಿ ಲಾಯರ್ ಪೊಲಿನಾ ಲೈಸೆಂಕೊ ಇದರ ಮುಖ್ಯಸ್ಥರಾಗಿದ್ದಾರೆ. ದುರುದ್ದೇಶದ ಮತ್ತು ಹಾನಿಯುಂಟುಮಾಡುವ ತಪ್ಪು ಮಾಹಿತಿಗಳ ಹರಡುವಿಕೆಯನ್ನು ಕಂಡು ಹಿಡಿದು ಅವನ್ನು ತಡೆಗಟ್ಟುವುದು ಮತ್ತು ಜನಾಭಿಪ್ರಾಯದಲ್ಲಿ ಹಸ್ತಕ್ಷೇಪವಾಗದಂತೆ ತಡೆಯುವುದು ಸಿಸಿಡಿ ಉದ್ದೇಶವಾಗಿದೆ.
ಭಾರತದ ಕಂಪ್ಯೂಟರ್ ಮತ್ತು ಐಟಿ ಕ್ರಾಂತಿಯ ಪಿತಾಮಹ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸ್ಯಾಮ್ ಪಿತ್ರೋಡಾ ಭಾರತದಲ್ಲಿ ಕಂಪ್ಯೂಟರ್ ಕ್ರಾಂತಿ ತಂದಿದ್ದರು ಮತ್ತು ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಪ್ರಧಾನಿಯ ಸಲಹೆಗಾರರಾಗಿದ್ದರು. ಪಿ.ಎಸ್. ರಾಘವನ್ ಇವರು ನಿವೃತ್ತ ವಿದೇಶಾಂಗ ಸೇವಾ ಅಧಿಕಾರಿ, ಇವರು ರಷ್ಯಾದಲ್ಲಿ ಭಾರತೀಯ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಉಕ್ರೇನ್ ಸೇನೆಯ ಯಶಸ್ಸು ಒಂದು ಭ್ರಮೆ ಎಂದು ಮತ್ತು ಪಶ್ಚಿಮ ದೇಶಗಳು ರಷ್ಯಾ ಅಧ್ಯಕ್ಷರ ವಿರುದ್ಧ ದುರುದ್ದೇಶದ ಪ್ರಚಾರ ನಡೆಸುತ್ತಿದೆ ಎಂಬ ಅಂಶಗಳನ್ನು ನಖ್ವಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿದೆ.
ಇದನ್ನು ಓದಿ: ಯುದ್ಧದ ನಡುವೆ ಫೋಟೋಗೆ ಪೋಸ್ ನೀಡಿದ ಝೆಲೆನ್ಸ್ಕಿ ದಂಪತಿ; ಟೀಕೆಗೊಳಗಾದ ಉಕ್ರೇನ್ ಅಧ್ಯಕ್ಷ