ಚಂಡೀಗಢ (ಹರಿಯಾಣ): ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಜೆಜೆಪಿ ಮತ್ತು ಭಾರತೀಯ ರಾಷ್ಟ್ರೀಯ ಲೋಕದಳಕ್ಕೆ (ಐಎನ್‌ಎಲ್‌ಡಿ) ಶಾಕ್ ಎದುರಾಗಿದೆ. ಮೂವರು ಮಾಜಿ ಶಾಸಕರು, ಪುರಸಭೆ ಅಧ್ಯಕ್ಷರು ಹಾಗೂ ಸುಮಾರು 15 ಹಾಲಿ ಮತ್ತು ಮಾಜಿ ಕೌನ್ಸಿಲರ್‌ಗಳು ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಚಂಡೀಗಢದಲ್ಲಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಉದಯಭಾನ್ ಮತ್ತು ಸಂಸದ ದೀಪೇಂದರ್ ಹೂಡಾ ಸಮ್ಮುಖದಲ್ಲಿ ಮೂವರು ಮಾಜಿ ಶಾಸಕರು, ಪುರಸಭೆ ಅಧ್ಯಕ್ಷರು ತಮ್ಮ ಬೆಂಬಲಿಗರೊಂದಿಗೆ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಜೈ ಪ್ರಕಾಶ್, ಮಾಜಿ ಸಚಿವ ಅಶೋಕ್ ಅರೋರಾ, ಮಾಜಿ ಸಂಸದ ಸುಶೀಲ್ ಇಂದೋರಾ ಸಹ ಉಪಸ್ಥಿತರಿದ್ದರು.
ಮಾಜಿ ಶಾಸಕರಾದ ಕರ್ನಲ್ (ನಿವೃತ್ತ) ರಘುಬೀರ್ ಸಿಂಗ್ ಛಿಲ್ಲರ್, ಫೂಲ್ ಸಿಂಗ್ ಖೇರಿ ಮತ್ತು ನಿರ್ಪೇಂದರ್ ಸಿಂಗ್ ಹಾಗೂ ಜುಲ್ಲಾನಾ ಮುನ್ಸಿಪಲ್ ಸಮಿತಿ ಅಧ್ಯಕ್ಷ ಮತ್ತು ಜೆಜೆಪಿಯ ಮಾಜಿ ಫರಿದಾಬಾದ್ ಜಿಲ್ಲಾ ಅಧ್ಯಕ್ಷ ರಾಜಾ ರಾಮ್ ಠಾಕೂರ್ ಸೇರಿ ಎಲ್ಲರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿ, ಭೂಪಿಂದರ್ ಹೂಡಾ, ಈ ಸಮ್ಮಿಶ್ರ ಸರ್ಕಾರವು ಇನ್ನು ಕೆಲವು ತಿಂಗಳುಗಳ ಕಾಲ ಅತಿಥಿಯಾಗಿದೆ. ಲೋಕಸಭೆ ಚುನಾವಣೆಗೆ ಕೇವಲ ಎಂಟು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಮಾರ್ಚ್ ವೇಳೆಗೆ ಚುನಾವಣಾ ದಿನಾಂಕಗಳು ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಅಲ್ಲದೇ, ಕಳೆದ ಎಂಟು ತಿಂಗಳಲ್ಲಿ ಸುಮಾರು 30 ಮಾಜಿ ಶಾಸಕರು ಮತ್ತು ಮಾಜಿ ಸಚಿವರು ಸೇರಿ ಬಹುತೇಕ ಮುಖಂಡರು ಆಡಳಿತಾರೂಢ ಜೆಜೆಪಿ ಮತ್ತು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಹರಿಯಾಣದಲ್ಲಿ ರಿವರ್ಸ್ ಆಪರೇಷನ್ ಕಮಲ ನಡೆಯುತ್ತಿದೆ ಎಂದರು.
ಹರಿಯಾಣ ಮುಖ್ಯಮಂತ್ರಿ ಲೋಕಸಭೆ ಚುನಾವಣೆಯೊಂದಿಗೆ ವಿಧಾನಸಭಾ ಚುನಾವಣೆಯನ್ನೂ ನಡೆಸಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಇದು ಸಂಭವಿಸಿದರೆ ವಿಧಾನಸಭಾ ಚುನಾವಣೆಗೆ ಕೇವಲ ಎಂಟು ತಿಂಗಳು ಮಾತ್ರ ಉಳಿಯಲಿದೆ. ಬಿಜೆಪಿ ಮತ್ತು ಜೆಜೆಪಿಯ ಹಲವು ನಾಯಕರು ನಮ್ಮ ಸಂಪರ್ಕದಲ್ಲಿದ್ದು, ಯಾವಾಗ ಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಸೇರಬಹುದು. ಕಾಂಗ್ರೆಸ್ ಕುಟುಂಬ ನಿರಂತರವಾಗಿ ಬೆಳೆಯುತ್ತಿದೆ ಎಂದಿ ತಿಳಿಸಿದರು.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಉದಯಭಾನ್ ಮಾತನಾಡಿ, ಕಾಂಗ್ರೆಸ್ ಸೇರಿದ ಎಲ್ಲ ಸಹೋದ್ಯೋಗಿಗಳಿಗೆ ಸಂಪೂರ್ಣ ಗೌರವ ನೀಡಲಾಗುವುದು. ಚುನಾವಣಾ ಸಮರಕ್ಕೆ ಪ್ರವೇಶಿಸಲು ಕಾಂಗ್ರೆಸ್ ಸಂಪೂರ್ಣ ಸನ್ನದ್ಧವಾಗಿದೆ ಎಂದು ಹೇಳಿದರು. ರಾಜ್ಯದ ಪ್ರತಿಯೊಂದು ವರ್ಗವು ಈಗಾಗಲೇ ಈ ಸರ್ಕಾರದಿಂದ ತೊಂದರೆಗೀಡಾಗಿದೆ. ಈಗ ಅಧಿಕಾರದಲ್ಲಿ ಕುಳಿತಿರುವ ಬಿಜೆಪಿ-ಜೆಜೆಪಿ ನಾಯಕರು ಮತ್ತು ಕಾರ್ಯಕರ್ತರು ಸಹ ಸರ್ಕಾರದ ಕಾರ್ಯವೈಖರಿಯಿಂದ ತುಂಬಾ ನಿರಾಶೆ ಮತ್ತು ಕೋಪಗೊಂಡಿದ್ದಾರೆ. ಈಗ ಕಾಂಗ್ರೆಸ್ ಕಾರ್ಯಕರ್ತರಾಗುವ ಮೂಲಕ ಚುನಾವಣೆಯಲ್ಲಿ ಸರ್ಕಾರವನ್ನು ಸೋಲಿಸಲು ಪಣತೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ತ್ರಿಪುರಾದಲ್ಲಿ ಟಿಎಂಸಿಗೆ ಬಿಗ್ ಶಾಕ್; ಟಿಎಂಸಿ ಮಾಜಿ ಅಧ್ಯಕ್ಷ ಸೇರಿ ಐವರು ಬಿಜೆಪಿ ಸೇರ್ಪಡೆ