ಬರ್ದ್ವಾನ್ (ಪಶ್ಚಿಮ ಬಂಗಾಳ): ಇಲ್ಲಿನ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ 2 ಮತ್ತು 3ರ ನಡುವೆ ನೀರಿನ ಟ್ಯಾಂಕ್ ಕುಸಿದು ಮೂವರು ಸಾವನ್ನಪ್ಪಿದ್ದು, ಸುಮಾರು 34 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬರ್ದ್ವಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯು ಬರ್ದ್ವಾನ್ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಭೀತಿ ಉಂಟುಮಾಡಿದೆ. ಅಲ್ಲದೇ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.
ಬುಧವಾರ ಮಧ್ಯಾಹ್ನ 12:08ಕ್ಕೆ ಬರ್ದ್ವಾನ್ ನಿಲ್ದಾಣದಲ್ಲಿ ಅಪಘಾತ ಸಂಭವಿಸಿದೆ. ಘಟನೆಯಿಂದಾಗಿ ಪ್ಲಾಟ್‌ಫಾರ್ಮ್ 1, 2 ಮತ್ತು 3ರಲ್ಲಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಬರ್ದ್ವಾನ್ ನಿಲ್ದಾಣದ ಪ್ಲಾಟ್‌ಫಾರ್ಮ್ 2 ಮತ್ತು 3 ರ ನಡುವೆ ಬುಧವಾರ 12 ಗಂಟೆ ಸುಮಾರಿಗೆ ಒಂದೂವರೆ ಲಕ್ಷ ಲೀಟರ್ ನೀರಿನ ಟ್ಯಾಂಕ್ ಕುಸಿದಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದ ಅನೇಕ ಪ್ರಯಾಣಿಕರು ಟ್ಯಾಂಕ್ ಅಡಿ ಸಿಲುಕಿದರು. ಇದರಿಂದ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ನಂತರ ರೈಲ್ವೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿತು.
ಸುಮಾರು 30ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದ್ದು, ಬರ್ದ್ವಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಮೂವರು ಆಸ್ಪತ್ರೆಗೆ ತೆರಳುವ ಮೊದಲೇ ಮೃತಪಟ್ಟಿದ್ದರು ಎನ್ನಲಾಗಿದೆ. ಮೃತರಲ್ಲಿ ಒಬ್ಬರನ್ನು ಮಹಿಳೆ ಇದ್ದಾರೆ. ಬರ್ದ್ವಾನ್ ಆಸ್ಪತ್ರೆಯ ಮೂಲಗಳ ಪ್ರಕಾರ, ಮೃತರು ಸೋನಾರಾಮ್ ತುಡು, ಕಾಂತಿ ಬಹದ್ದೂರ್ ಮತ್ತು ಮಾಫಿಜಾ ಖಾತುನ್ ಎಂದು ಗುರುತಿಸಲಾಗಿದೆ. ಅವರಲ್ಲಿ ಮಾಫಿಜಾ ಖಾತುನ್ ಬರ್ದ್ವಾನ್, ಕಾಂತಿ ಬಹದ್ದೂರ್ ಬಿಹಾರದ ಸಾಹೇಬ್‌ಗಂಜ್ ಮತ್ತು ಸೋನಾರಾಮ್ ತುಡು ಜಾರ್ಖಂಡ್ ನಿವಾಸಿ ಎಂದು ತಿಳಿದು ಬಂದಿದೆ.
ಪೂರ್ವ ಬರ್ದ್ವಾನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮನದೀಪ್ ಮಾತನಾಡಿ,"ಬರ್ದ್ವಾನ್ ನಿಲ್ದಾಣದ ಪ್ಲಾಟ್‌ಫಾರ್ಮ್ 2 ಮತ್ತು 3 ನಡುವಿನ ನೀರಿನ ಟ್ಯಾಂಕ್‌ನ ಒಂದು ಭಾಗ ಸ್ಫೋಟಗೊಂಡಿತು ಮತ್ತು ಹಲವಾರು ಭಾಗಗಳು ಕುಸಿದವು, ಆ ಸಮಯದಲ್ಲಿ, ಫ್ಲಾಟ್ ಫಾರ್ಮ್ನಲ್ಲಿದ್ದ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಬರ್ದ್ವಾನ್ ಪೊಲೀಸ್ ಠಾಣೆಯ ಪೊಲೀಸ್ ರೈಲ್ವೆ ಸ್ಟೇಷನ್ಗೆ ಧಾವಿಸಿದ್ದಾರೆ. ರಕ್ಷಿಸಲಾದವರನ್ನು ಬರ್ದ್ವಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಮೂರು ಸಾವನ್ನಪ್ಪಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
ಬರ್ದ್ವಾನ್ ಸೌತ್ ಅಸೆಂಬ್ಲಿಯ ತೃಣಮೂಲ ಕಾಂಗ್ರೆಸ್ ಶಾಸಕ ಖೋಕನ್ ದಾಸ್, "ರೈಲ್ವೆ ಇಲಾಖೆಯ ನಿರ್ಲಕ್ಷ್ಯದಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿಂದೆಯೂ ಹಳಿತಪ್ಪಿದೆ. ಆದರೆ ರೈಲ್ವೆ ಯಾವುದೇ ಪಾಠ ಕಲಿತಿಲ್ಲ" ಎಂದು ಇತ್ತಿಚಿಗಿನ ರೈಲ್ವೇ ದುರಂತಗಳಿಗೆ ತಳುಕು ಹಾಕಿ ಟೀಕಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಮಂಗಗಳನ್ನು ಕೊಂದು ಬೇಯಿಸಿ ತಿಂದ ಭಿಕ್ಷುಕರು!: ಇಬ್ಬರ ಬಂಧನ, ನಾಲ್ವರು ಪರಾರಿ