ಪೂರ್ವ ಗೋದಾವರಿ(ಆಂಧ್ರಪ್ರದೇಶ) : ಜಿಲ್ಲೆಯಲ್ಲಿನ ರಾಜಮಂಡ್ರಿಯ ಇಸುಕರೆವು ಎಂಬಲ್ಲಿ ಗೋದಾವರಿ ನದಿಯಲ್ಲಿ ಮೂರು ಶವಗಳು ತೇಲಿ ಬಂದ ಘಟನೆಗೆ ಸಂಬಂಧಿಸಿದಂತೆ ಅತ್ಯಂತ ದುರಂತ ಸಂಗತಿ ಬೆಳಕಿಗೆ ಬಂದಿದೆ.
ಕನ್ನದೇವಿ (34), ನಾಗಮಣಿ (32) ಮತ್ತು ದುರ್ಗಾ ರಾವ್ (30) ಗೋದಾವರಿ ನದಿಯಲ್ಲಿ ತೇಲಿ ಬಂದ ಮೃತರು. ತಾಯಿಯ ಸಾವಿಗೆ ಮನನೊಂದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂರು ದಿನಗಳ ಕಾಲ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳಿದ್ದ ವೇಳೆ ಯಾರೂ ಗುರ್ತಿಸದಿದ್ದಾಗ ಪೊಲೀಸರೇ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಅಯ್ಯೋ ಕೊನೆಯದಾಗಿ ಒಂದು ಬಾರಿಯಾದರೂ ನೋಡಲಿಲ್ಲವೆಂದು ದುಃಖಿಸುತ್ತಿದ್ದ ಆ ತಂದೆಯ ರೋದನೆಯನ್ನು ಕಂಡವರ ಕಣ್ಣಾಲಿಗಳು ಒದ್ದೆಯಾಗಿದ್ದವು.
ಮದುವೆ ಮುಂಚೆ ಮನೆ ನಿರ್ಮಾಣ
ಆರ್ಥಿಕ ತೊಂದರೆಗಳಿಂದಾಗಿ ಈ ಮೂವರೂ 10ನೇ ತರಗತಿಗೆ ಶಾಲೆ ನಿಲ್ಲಿಸಿದ್ದರು. ಹೆಣ್ಣುಮಕ್ಕಳು ಮನೆಯಲ್ಲಿದ್ದರೆ, ಮಗ ರಾಜಮಂಡ್ರಿಯ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಹಿರಿಯ ಸಹೋದರಿಗೆ ಮದುವೆ ಕೂಡ ನಿಶ್ಚಯವಾಗಿತ್ತು. ಆದರೆ, ಮದುವೆಗೂ ಮುಂಚೆ ಮನೆ ಕಟ್ಟಬೇಕೆಂಬ ಸಹೋದರಿಯ ಮಾತಿಗೆ ಓಗೊಟ್ಟು ಕುಟುಂಬ ಮನೆ ನಿರ್ಮಾಣ ಕೆಲಸಗಳಲ್ಲಿ ನಿರತರಾದ ವೇಳೆ, ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದರು.
ತಾಯಿಯ ಸಾವಿಗೆ ನೊಂದ ಮಕ್ಕಳು
ಅಪ್ಪ ನೀನು ಮನೆಗೆ ಹೋಗು, ನಾವು ಮೂವರು ಉಳಿದ ಕೆಲಸಗಳನ್ನು ನೋಡಿಕೊಂಡು ಬೇಗನೆ ಮನೆಗೆ ಬರ್ತೀವಿ ಎಂದು ಕನ್ನದೇವಿ, ನಾಗಮಣಿ ಮತ್ತು ದುರ್ಗಾರಾವ್ ಇಸುಕರೆವುವಿನತ್ತ ತೆರಳಿದ್ದರು. ಆ ಸಮಯದಲ್ಲಿ ಮೂವರು ಗೋದಾವರಿ ನದಿ ಬಳಿ ಅಳುತ್ತಾ ಮಾತನಾಡಿಕೊಂಡಿರುವುದಾಗಿ ವಿಚಾರಣೆ ವೇಳೆ ಮೀನುಗಾರರು ಹೇಳಿದ್ದಾರೆ. ತಾಯಿಯ ಸಾವಿನಿಂದ ದುಃಖಿತರಾದ ಮಕ್ಕಳು, ನದಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಸಾವಿಗೆ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.