ಪಾಟ್ನಾ (ಬಿಹಾರ) : ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸೇರಿದ ಮೂರು ರೈತರು ಅಪರಿಚಿತ ದುಷ್ಕರ್ಮಿಗಳಿಂದ ಕೊಲೆಯಾಗಿದ್ದಾರೆ. ನಳಂದ, ವೈಶಾಲಿ ಮತ್ತು ರೋಹ್ಟಾಸ್ ಜಿಲ್ಲೆಗಳ ರೈತರು ಹತ್ಯೆಯಾಗಿದ್ದಾರೆ.
ಮೊದಲ ಘಟನೆಯಲ್ಲಿ ಧಾರಂಪುರ ಗ್ರಾಮದ ಹಿಲ್ಸಾ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟ ಹೊಲದಲ್ಲಿ ತನ್ನ ಬೆಳೆಗಳನ್ನು ಕಾಯುತ್ತಿದ್ದ ಕೃಷಿಕನನ್ನು ಕೆಲ ದುಷ್ಕರ್ಮಿಗಳು ಇರಿದು ಕೊಂದಿದ್ದಾರೆ. ಮೃತನನ್ನು ನರೇಶ್ ಪ್ರಸಾದ್ ಎಂದು ಗುರುತಿಸಲಾಗಿದೆ.
2ನೇ ಘಟನೆಯಲ್ಲಿ ರೈತ ಮುಖ್ಲಾಲ್ ರಾಯ್ ರಾತ್ರಿ ಹೊತ್ತಿನಲ್ಲಿ ತನ್ನ ಹೊಲದಲ್ಲಿ ಮಲಗಲು ಹೋಗುತ್ತಿದ್ದಾಗ ದುಷ್ಕರ್ಮಿಗಳು ತೀಕ್ಷ್ಣವಾದ ವಸ್ತುವಿನಿಂದ ಇರಿದು ಕೊಂದಿದ್ದಾರೆ. 3ನೇ ಘಟನೆಯಲ್ಲಿ ರೋಹ್ಟಾಸ್ನ ಕಾರ್ಗಹಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಘುರನ್‌ಪಿಪ್ರ ಗ್ರಾಮದಲ್ಲಿ ಹೊಲದಲ್ಲಿ ತಮ್ಮ ಬೆಳೆಗಳನ್ನು ಕಾಪಾಡುತ್ತಿದ್ದ ಶಶಿಕಾಂತ್ ರೈ ಎಂಬ ರೈತನನ್ನು ಗುಂಡಿಕ್ಕಿ ಕೊಂದಿದ್ದಾರೆ.
ಎಲ್ಲಾ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಈ ಕೊಲೆಗಳ ಹಿಂದಿನ ಉದ್ದೇಶಗಳ ಕುರಿತು ತನಿಖೆ ನಡೆಯುತ್ತಿದೆ. 'ಅಪರಾಧಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.