ಕೋನಸೀಮಾ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ಸಿನಿಮೀಯ ರೀತಿಯ ಕೃತ್ಯವೊಂದು ನಡೆದಿದೆ. ಮಹಿಳೆಯೊಬ್ಬಳು ತನ್ನ ಪ್ರಿಯಕರನ್ನು ಉಳಿಸಿಕೊಳ್ಳಲು ಆತನ ಪತ್ನಿ ಮತ್ತು ಅತ್ತೆಯನ್ನು ಕೊಲೆ ಮಾಡಿಸಿದ್ದಾರೆ. ಅದೂ ತನ್ನ ಇಬ್ಬರು ಪುತ್ರಿಯರಿಂದಲೇ ಮನೆಗೆ ಬೆಂಕಿ ಹಚ್ಚಿಸಿ ಇವರ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಇಲ್ಲಿನ ಕೊಮರಗಿರಿಪಟ್ಟಣಂನಲ್ಲಿ ಇದೇ ಜುಲೈ 2ರಂದು ಜ್ಯೋತಿ ಮತ್ತು ಮಂಗಾದೇವಿ ಎಂಬುವವರು ಮನೆಗೆ ಬೆಂಕಿ ಬಿದ್ದು ಸಜೀವ ದಹನವಾಗಿದ್ದರು. ಪೊಲೀಸರು ಈ ಪ್ರಕರಣದ ತನಿಖೆಗಿಳಿದಾಗ ಆಘಾತಕಾರಿ ಅಂಶಗಳು ಬಯಲಿಗೆ ಬಂದಿವೆ. ಈ ಸಂಬಂಧ ಈಗಾಗಲೇ ನಾಗಲಕ್ಷ್ಮಿ ಎಂಬಾಕೆ ಹಾಗೂ ಆಕೆಯ ಇಬ್ಬರು ಪುತ್ರಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ಸಂಬಂಧ: ಮೃತ ಜ್ಯೋತಿ, ಆರೋಪಿ ನಾಗಲಕ್ಷ್ಮಿ ಇಬ್ಬರು ಕೊಮರಗಿರಿಪಟ್ಟಣಂ ಗ್ರಾಮದವರೇ ಆಗಿದ್ಧಾರೆ. ಇದೇ ಗ್ರಾಮದ ಸುರೇಶ್ ಎಂಬಾತನನ್ನು ಮೇ 10ರಂದು ಜ್ಯೋತಿ ವಿವಾಹವಾಗಿದ್ದರು. ಆದರೆ, ಇದಕ್ಕೂ ಮುನ್ನ ನಾಗಲಕ್ಷ್ಮಿಯೊಂದಿಗೆ ಸುರೇಶ್ ಅಕ್ರಮ ಸಂಬಂಧ ಹೊಂದಿದ್ದ. ಜ್ಯೋತಿಯನ್ನು ಮದುವೆಯಾದ ಬಳಿಕ ನಾಗಲಕ್ಷ್ಮಿ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿದ್ದ.
ಪ್ರಿಯಕರನ ಬಿಡದ ಪ್ರಿಯತಮೆ: ಮದುವೆಯಾದ ನಂತರ ಸುರೇಶ್ ಜೊತೆಗಿನ ಸಂಬಂಧವನ್ನು ಕಡಿದಕೊಂಡಿದ್ದರೂ ನಾಗಲಕ್ಷ್ಮಿ ಮಾತ್ರ ಬಿಟ್ಟಿರಲಿಲ್ಲ. ಅಲ್ಲದೇ, ತನ್ನಿಂದ ದೂರವಾಗಿರುವುದಕ್ಕೆ ಕೆರಳಿದ್ದ ಆಕೆ, ಹೇಗಾದರೂ ಮಾಡಿ ಸುರೇಶ್ನನ್ನು ತನ್ನ ವಶದಲ್ಲಿರಿಸಿಕೊಳ್ಳಲು ಬಯಸಿದ್ದಳು. ಇದಕ್ಕಾಗಿ ನಾನಾ ಪ್ಲಾನ್ಗಳನ್ನು ನಾಗಲಕ್ಷ್ಮಿ ಮಾಡುತ್ತಲೇ ಇದ್ದಳು.
ಬೇರೆ-ಬೇರೆ ಹೆಸರಲ್ಲಿ ಪ್ರೇಮ ಪತ್ರ: ಜ್ಯೋತಿ ಮತ್ತು ಸುರೇಶ ನಡುವೆ ಕಲಹ ಹುಟ್ಟು ಮಾಡಬೇಕು. ಇದರಿಂದ ಆತ ಮತ್ತೆ ತನ್ನೊಂದಿಗೆ ಸೇರುವಂತೆ ಆಗಬೇಕೆಂದು ನಾಗಲಕ್ಷ್ಮಿ ಕುತಂತ್ರಗಳನ್ನು ಮಾಡುತ್ತಿದ್ದಳು. ಜ್ಯೋತಿಗೆ ಬೇರೆಯವರ ಜೊತೆ ಸಂಬಂಧವಿದೆ ಎಂದು ಬಿಂಬಿಸಲು ಬೇರೆ - ಬೇರೆ ಹೆಸರಲ್ಲಿ ಕೆಲವು ಪ್ರೇಮ ಪತ್ರಗಳನ್ನೂ ಮನೆಗೆ ಕಳುಹಿಸಿದ್ದಳು. ಆದರೆ, ಇದ್ಯಾವುದನ್ನೂ ಸುರೇಶ್ ನಂಬಿರಲಿಲ್ಲ.
ಹತ್ಯೆಯ ಪ್ಲಾನ್, ಮನೆಗೆ ಬೆಂಕಿ: ಸುರೇಶ್ನನ್ನು ಪಡೆಯಬೇಕೆಂದು ಪಟ್ಟು ಹಿಡಿದಿದ್ದ ನಾಗಲಕ್ಷ್ಮಿ ಕೊನೆಗೆ ಜ್ಯೋತಿಯ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಳು. ಅಂತೆಯೇ, ಜುಲೈ 2ರಂದು ಬೆಳಗಿನ ಜಾವ ಮನೆಯಲ್ಲಿ ಸುರೇಶ್ ಇಲ್ಲದೇ ಸಮಯ ನೋಡಿ ಮನೆಗೆ ಬೆಂಕಿಯನ್ನು ಹಚ್ಚಿಸಿದ್ದಳು. ಅದು ಕೂಡ ತನ್ನ ಇಬ್ಬರು ಪುತ್ರಿಯರ ಕೈಗೆ ಪೆಟ್ರೋಲ್ ಬಾಟಲ್ ಮತ್ತು ಬೆಂಕಿ ಪೊಟ್ಟಣ ಕೊಟ್ಟು ಕಳುಹಿಸಿದ್ದಳು. ತಾಯಿ ನಾಗಲಕ್ಷ್ಮಿ ಹೇಳಿದಂತೆಯೇ ಆ ಇಬ್ಬರು ಮಕ್ಕಳು ಜ್ಯೋತಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.
ಕೃತ್ಯ ಬಯಲಾಗಿದ್ದು ಹೇಗೆ?: ಮನೆಗೆ ಬೆಂಕಿ ಹಚ್ಚಿದಾಗ ಮನೆಯಲ್ಲಿ ಜ್ಯೋತಿ ಹಾಗೂ ಈಕೆಯ ತಾಯಿ ಮಂಗಾದೇವಿ ಮಾತ್ರ ಇದ್ದರು. ಬೆಂಕಿ ಹೊತ್ತಿಕೊಂಡ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಪ್ರಯತ್ನಿಸಿದ್ದರು. ಅಷ್ಟರಲ್ಲೇ, ಇಬ್ಬರು ಸಜೀವ ದಹನವಾಗಿದ್ದರು. ಈ ಘಟನೆಯಾದ ನಂತರ ಆರಂಭದಲ್ಲಿ ಪೊಲೀಸರು ಸುರೇಶ್ನ ಮೇಲೆ ಶಂಕೆ ವ್ಯಕ್ತಪಡಿಸಿದ್ದರು.
ಆದರೆ, ಬೆಂಕಿ ಹೊತ್ತಿಕೊಂಡಾಗ ಇಬ್ಬರು ಓಡಿಹೋಗಿರುವುದನ್ನು ನೋಡಿರುವುದಾಗಿ ಪ್ರತ್ಯಕ್ಷದರ್ಶಿಗಳು ನೀಡಿದ ಹೇಳಿಕೆಯಿಂದ ತನಿಖೆಯ ತಿರುವು ಪಡೆಯಿತು. ಅಂತೆಯೇ, ಸುರೇಶ್ ಮತ್ತು ನಾಗಲಕ್ಷ್ಮಿ ಇಬ್ಬರನ್ನೂ ವಿಚಾರಣೆ ನಡೆಸಿದಾಗ ಸಂಪೂರ್ಣ ರಹಸ್ಯ ಬಯಲಾಗಿದೆ. ಸದ್ಯ ನಾಗಲಕ್ಷ್ಮಿ ಹಾಗೂ ಆಕೆಯ ಇಬ್ಬರು ಪುತ್ರಿಯರನ್ನು ಜೈಲು ಸೇರಿದ್ದಾರೆ.
ಇದನ್ನೂ ಓದಿ: ಆಟವಾಡ್ತಿದ್ದ ಬಾಲಕನ ಮೇಲೆ ಬಿತ್ತು ಯಂತ್ರ.. ಕ್ಷಣಾರ್ಧದಲ್ಲಿ ಹಾರಿಹೋಯ್ತು ಪ್ರಾಣಪಕ್ಷಿ