ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ಸರ್ಕಾರದ ಸೂಚನೆ ಮೇರೆಗೆ ಧಾರ್ಮಿಕ ಸ್ಥಳಗಳಿಂದ ಅಕ್ರಮವಾಗಿ ಅಳವಡಿಸಲಾಗಿದ್ದ 11,000 ಧ್ವನಿವರ್ಧಕಗಳನ್ನು ತೆಗೆದು ಹಾಕಲಾಗಿದೆ. ಮತ್ತು 35,000 ಧ್ವನಿವರ್ಧಕಗಳ ಶಬ್ದವನ್ನು ಕಡಿಮೆ ಮಾಡಲಾಗಿದೆ.
ಧಾರ್ಮಿಕ ಸ್ಥಳಗಳಲ್ಲಿ ಅಕ್ರಮವಾಗಿ ಅಳವಡಿಸಲಾಗಿರುವ ಧ್ವನಿ ವರ್ಧಕಗಳನ್ನು ತೆಗೆದುಹಾಕಲು ಮತ್ತು ಕಾನೂನು ಬದ್ಧವಾಗಿ ಧ್ವನಿ ವರ್ಧಕಗಳ ಶಬ್ದವನ್ನು ಕಡಿಮೆ ಮಾಡಲು ರಾಜ್ಯಾದ್ಯಂತ ಅಭಿಯಾನ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರಶಾಂತ್ ಕುಮಾರ್ ಬುಧವಾರ ತಿಳಿಸಿದ್ದಾರೆ. ಅದರಂತೆ ಬುಧವಾರ ಮಧ್ಯಾಹ್ನದವರೆಗೆ 10,923 ಧ್ವನಿವರ್ಧಕಗಳನ್ನು ತೆಗೆದು ಹಾಕಲಾಗಿದೆ ಮತ್ತು 35,221 ಧ್ವನಿವರ್ಧಕಗಳ ಧ್ವನಿಯನ್ನು ಮಿತಿಗೊಳಿಸಲಾಗಿದೆ.
ನಾವು ತೆರವು ಮಾಡಿರುವ, ಮಾಡುತ್ತಿರುವ ಧ್ವನಿವರ್ಧಕಗಳು ಅನಧಿಕೃತವಾಗಿವೆ. ಜಿಲ್ಲಾಡಳಿತದಿಂದ ಸೂಕ್ತ ಅನುಮತಿ ಪಡೆಯದೇ ಅಳವಡಿಸಿರುವ ಅಥವಾ ಅನುಮತಿಗಿಂತ ಹೆಚ್ಚಿನ ಪ್ರಮಾಣದ ಶಬ್ದ ಇರುವ ಧ್ವನಿವರ್ಧಕಗಳನ್ನು ನಾವು ತೆರವುಗೊಳಿಸುತ್ತಿದ್ದೇವೆ. ಧ್ವನಿವರ್ಧಕಗಳ ನಿಯಮಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ಆದೇಶವನ್ನು ಪರಿಗಣನೆಗೆ ತೆಗೆದುಕೊಂಡು ನಾವು ಕಾರ್ಯಾಚರಣೆ ಕೈಗೊಂಡಿದ್ದೇವೆ ಎಂದು ಪ್ರಶಾಂತ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: ಧಾರ್ಮಿಕ ಸ್ಥಳಗಳಲ್ಲಿ ಕಾನೂನು ಬಾಹಿರ ಧ್ವನಿವರ್ಧಕಗಳ ತೆರವಿಗೆ ಯೋಗಿ ಸರ್ಕಾರದ ಆದೇಶ
ಕಳೆದ ವಾರ ಹಿರಿಯ ಅಧಿಕಾರಿಗಳೊಂದಿಗೆ ಕಾನೂನು ಸುವ್ಯವಸ್ಥೆ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೀಡಿದ ಮಾರ್ಗಸೂಚಿಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳುತ್ತಿರುವುದು ಗಮನಾರ್ಹ ವಿಷಯ. ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ ನಂಬಿಕೆಗಳ ಪ್ರಕಾರ ಪೂಜೆ, ಪ್ರಾರ್ಥನೆ ಸಲ್ಲಿಸುವ ಸ್ವಾತಂತ್ರ್ಯವಿದೆ. ಆದರೆ, ಇತರರಿಗೆ ಯಾವುದೇ ತೊಂದರೆಯಾಗದಂತೆ ಧ್ವನಿವರ್ಧಕಗಳ ಶಬ್ದವು ಆವರಣದಿಂದ ಹೊರಗೆ ಹೋಗಬಾರದು ಎಂದು ಸಿಎಂ ಯೋಗಿ ಹೇಳಿದ್ದರು.