ಚೆನ್ನೈ(ತಮಿಳುನಾಡು): ಹಿಂದಿ ರಾಷ್ಟ್ರೀಯ ಭಾಷೆ ವಿಚಾರವಾಗಿ ಕಳೆದ ಕೆಲ ದಿನಗಳ ಹಿಂದೆ ನಟ ಸುದೀಪ್- ಅಜಯ್ ದೆವಗನ್ ಮಧ್ಯೆ ಟ್ವೀಟ್ ವಾರ್ ನಡೆದಿತ್ತು. ಇದಾದ ಬಳಿಕ ರಾಜಕೀಯ ಬಣ್ಣ ಪಡೆದುಕೊಂಡಿದ್ದ ಈ ವಿಚಾರ ಸದ್ಯ ತಣ್ಣಗಾಗಿದೆ.
ಇದರ ಬೆನ್ನಲ್ಲೇ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮಡಿ ಹಿಂದಿ ಮಾತನಾಡುವವರು ನಮ್ಮೂರಲ್ಲಿ ಪಾನಿ ಪೂರಿ ಮಾರುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಭಾರತಿಯಾರ್ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು,ತಮಿಳುನಾಡಿನ ವಿದ್ಯಾರ್ಥಿಗಳು ಯಾವುದೇ ಭಾಷೆ ಕಲಿಯಲು ಸಿದ್ಧರಾಗಿದ್ದಾರೆ.
ಆದರೆ, ಹಿಂದಿ ಐಚ್ಛಿಕವಾಗಿರಬೇಕೇ ಹೊರತು ಕಡ್ಡಾಯವಾಗಬಾರದು ಎಂದರು. ಈ ಹಿಂದೆ, ಹಿಂದಿ ಭಾಷೆ ಕಲಿತರೆ ಉದ್ಯೋಗ ಸಿಗುತ್ತದೆ ಎಂದು ಹೇಳಲಾಗುತ್ತಿತ್ತು. ನಮಗೆ ಕೆಲಸ ಸಿಕ್ಕಿದೆಯಾ? ನಮ್ಮ ಕೊಯಮತ್ತೂರಿಗೆ ಹೋಗಿ ನೋಡಿ, ಹಿಂದಿ ಭಾಷೆ ಮಾತನಾಡುವವರು ಪಾನಿ ಪುರಿ ಮಾರುತ್ತಿದ್ದಾರೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಯೋಜನಕಾರಿ ಅಂಶಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಯಾತ್ರಾರ್ಥಿಗಳ ಹೊತ್ತೊಯ್ಯುತ್ತಿದ್ದ ಬಸ್ಗೆ ದಿಢೀರ್ ಬೆಂಕಿ.. ಇಬ್ಬರು ಸಜೀವ ದಹನ
ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆಯಾಗಿದೆ. ನಾವು ಇಂಗ್ಲಿಷ್ ಕಲಿತ್ತಿದ್ದೇವೆ. ಈ ಭಾಷೆ ಕಲಿತ ಬಳಿಕ ಇತರ ಭಾಷೆಗಳ ಅವಶ್ಯಕತೆ ಏನಿದೆ ಎಂದು ಪ್ರಶ್ನೆ ಮಾಡಿದರು. ಇದೇ ವೇಳೆ ಮಾತು ಮುಂದುವರೆಸಿದ ಅವರು, ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ತಮಿಳುನಾಡು ಮುಂಚೂಣಿಯಲ್ಲಿದೆ.
ದಕ್ಷಿಣ ಭಾರತದ ರಾಜ್ಯಗಳು ಅಲ್ಲಿನ ಮಾತೃಭಾಷೆ ಜೊತೆಗೆ ಇಂಗ್ಲಿಷ್ ಕಲಿತರೆ, ಬೇರೆ ಭಾಷೆಗಳ ಅಗತ್ಯ ಏನಿದೆ ಎಂದು ಪ್ರಶ್ನೆ ಮಾಡಿದರು. ಜೊತೆಗೆ ಈ ಹಿಂದಿನಿಂದಲೂ ತಮಿಳುನಾಡು ಹಿಂದಿ ಭಾಷೆ ವಿರುದ್ಧ ಚಳವಳಿ ನಡೆಸುತ್ತಿದೆ ಎಂದರು.