ಶಿಮ್ಲಾ (ಹಿಮಾಚಲ ಪ್ರದೇಶ): ಭಾರತದ ಮಶ್ರೂಮ್ ಸಿಟಿ ಅಂದ ಕ್ಷಣ ತಕ್ಷಣ ನೆನಪಾಗೋದು ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆ. ಆದರೆ, ಈ ಖ್ಯಾತಿ ಗಳಿಸುವ ಹಿಂದಿನ ಯಶಸ್ಸು ಅಣಬೆ ಸಂಶೋಧನಾ ಕೇಂದ್ರಕ್ಕೆ ಸಲ್ಲುತ್ತದೆ. ಒಮ್ಮೆ ಇದರ ಇತಿಹಾಸ ನೋಡಿದರೆ 1961 ರಲ್ಲಿ ಮೊದಲ ಬಾರಿಗೆ ಸೋಲನ್‌ನಲ್ಲಿರುವ ಭಾರತೀಯ ಸಂಶೋಧನಾ ಕೇಂದ್ರವು ಅಣಬೆಗಳ ಸಂಶೋಧನೆಯನ್ನು ಪ್ರಾರಂಭಿಸಿತು. ಇದಕ್ಕಾಗಿ 1983ರಲ್ಲಿ ಸೋಲನ್ನಲ್ಲಿ ಪ್ರತ್ಯೇಕ ಅಣಬೆ ಸಂಶೋಧನಾ ಕೇಂದ್ರ ಸ್ಥಾಪಿಸಲಾಯಿತು. ಬಳಿಕ ಸೆಪ್ಟೆಂಬರ್ 10, 1997ರಂದು ಸೋಲನ್ ನಗರಕ್ಕೆ ಭಾರತದ ಪ್ರಸಿದ್ಧ ನಗರ ಎಂಬ ಬಿರುದು ಬಂದಿತು.
ಸಂಶೋಧನಾ ಕೇಂದ್ರವು ಈವರೆಗೆ 30 ಜಾತಿಯ ಅಣಬೆಗಳನ್ನು ಬೆಳೆಸಿದೆ. ಅಷ್ಟೇ ಅಲ್ಲ ಕ್ಯಾನ್ಸರ್ ವಿರುದ್ಧ ಹೋರಾಡಬಲ್ಲ ವಿಶೇಷ ಗುಣಲಕ್ಷಣ ಹೊಂದಿರುವ ಗ್ರಿಫೋಲಾ ಅಣಬೆಯ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಎಂಆರ್ ವಿಜ್ಞಾನಿಗಳ ಪ್ರಕಾರ ಈ ಅಣಬೆಯೂ ಕ್ಯಾನ್ಸರ್ ಚಿಕಿತ್ಸೆಗೆ ಉಪಯುಕ್ತವಾಗಿದ್ದು, ಮಧುಮೇಹ ಚಿಕಿತ್ಸೆಯಲ್ಲಿ ರೋಗ ನಿರೋಧಕ ಶಕ್ತಿಯಾಗಿಯೂ ಬಳಸಬಹುದು ಎನ್ನುತ್ತಾರೆ.
ಹೆಚ್ಚಿನದಾಗಿ ಗ್ರಿಫೊಲಾ ಅಣಬೆಗಳು ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಅವು ಮೆಗ್ನೀಶಿಯಂ, ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂನಂತಹ ದಾತುಗಳಿಗೆ ಉತ್ತಮ ಮೂಲವಾಗಿದೆ.
ಈ ರೀತಿಯ ಅಣಬೆಗಳನ್ನು ಚೀನಾ ಹಾಗೂ ಜಪಾನ್ನಲ್ಲಿ ಬೆಳೆಯಲಾಗುತ್ತದೆ. ಇದೀಗ ಪ್ರಸ್ತುತ ಸೋಲನ್ನ ವಿಜ್ಞಾನಿಗಳು ಈ ಔಷಧ ಗುಣವುಳ್ಳ ಅಣಬೆ ಬೆಳೆಯುವಲ್ಲಿ ನಿರತರಾಗಿದ್ದಾರೆ. ಅಲ್ಲದೇ ಇಲಾಖೆಯ ಪರವಾಗಿ ರೈತರಿಗೆ ಈ ಅಣಬೆ ಬೆಳೆಯಲು ತರಬೇತಿ ನೀಡಲು ಯೋಚಿಸಲಾಗಿದೆ.
ಇನ್ನು ಮಹಾಮಾರಿ ಕ್ಯಾನ್ಸರ್ ಮಣಿಸುವಲ್ಲಿ ಈ ಗ್ರಿಫೊಲಾ ಮಶ್ರೂಮ್ ಜಾಗತಿಕವಾಗಿ 2ನೇ ಸ್ಥಾನ ಪಡೆದಿದೆ.
ಈ ಅಣಬೆ ಸಂಶೋಧನಾ ಕೇಂದ್ರವು ಈವರೆಗೆ ಸುಮಾರು 10ರಿಂದ 15 ಪ್ರಭೇದದ ಅಣಬೆಗಳ ಬೆಳೆಸಿದೆ. ಇವು ಮಾನವ ನರಮಂಡಲದ ಶಕ್ತಿ ಹೆಚ್ಚಿಸುವ ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಲಿವೆ. ಅಲ್ಲದೇ ಈ ಅಣಬೆ ಕೃಷಿಯ ಬಗ್ಗೆ ರೈತರಿಗೆ ತರಬೇತಿ ನೀಡಿದರೆ ಅವರು ಸಹ ಹೆಚ್ಚಿನ ಲಾಭ ಗಳಿಸಬಹುದು.
ಅಣಬೆಯಲ್ಲಿ ಔಷಧೀಯ ಗುಣವಿರುವ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗೀಗ ಬೇಡಿಕೆ ಹೆಚ್ಚಿದ್ದು, ದೊಡ್ಡ ಪ್ರಮಾಣದಲ್ಲಿ ಅಣಬೆ ಖರೀದಿಸಲು ಕಂಪನಿಗಳು ಮುಂದಾಗಿವೆ. ಮುಂಬರುವ ದಿನಗಳಲ್ಲಿ ಈ ಅಣಬೆ ಕುರಿತು ಇನ್ನಷ್ಟು ಸಂಶೋಧನೆ ಕೈಗೊಳ್ಳಲು ಸಂಸ್ಥೆ ನಿರ್ಧರಿಸಿದೆ. ಅಣಬೆ ಕೃಷಿಯ ವಿವಿಧ ಮಾದರಿಗಳ ಕುರಿತು ಕೃಷಿಕರಿಗೆ ಮಾಹಿತಿ ನೀಡಲು ಸಿದ್ಧತೆ ನಡೆಸುತ್ತಿದೆ.