ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ನಿಗದಿಪಡಿಸಿದ ಮಾನದಂಡಗಳ ಪಾಲನೆಯಲ್ಲಿ ಲೋಪದೋಷ ಕಂಡುಬಂದಿದ್ದು ಎರಡು ತಿಂಗಳ ಅವಧಿಯಲ್ಲಿ ದೇಶಾದ್ಯಂತ ಸುಮಾರು 40 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಮಾನ್ಯತೆ ಕಳೆದುಕೊಂಡಿವೆ. ಅಷ್ಟೇ ಅಲ್ಲದೇ ತಮಿಳುನಾಡು, ಗುಜರಾತ್, ಅಸ್ಸಾಂ, ಪಂಜಾಬ್, ಆಂಧ್ರಪ್ರದೇಶ, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸುಮಾರು 100 ವೈದ್ಯಕೀಯ ಕಾಲೇಜುಗಳು ಎನ್‌ಎಂಸಿಯ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಲು ವಿಫಲವಾಗಿದ್ದು ಮಾನ್ಯತೆ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಮಂಗಳವಾರ ಅಧಿಕೃತ ಮೂಲಗಳು ತಿಳಿಸಿವೆ.
ವೈದ್ಯಕೀಯ ಕಾಲೇಜುಗಳು ನಿಗದಿಗೊಳಿಸಿದ ನಿಯಮದ ಮಾನದಂಡಗಳನ್ನು ಪಾಲಿಸುತ್ತಿಲ್ಲ. ಅಧ್ಯಾಪಕರು ಹಾಗೂ ಸಿಸಿಟಿವಿ ಕ್ಯಾಮರಾಗಳಿಗೆ ಸಂಬಂಧಿಸಿದ ಹಲವಾರು ಲೋಪದೋಷ, ಆಧಾರ್-ಸಂಯೋಜಿತ ಬಯೋಮೆಟ್ರಿಕ್ ಹಾಜರಾತಿ ಕಾರ್ಯವಿಧಾನ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದಾಗಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳುತ್ತಿವೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, 2014 ರಿಂದ ವೈದ್ಯಕೀಯ ಕಾಲೇಜುಗಳ ಆರಂಭದ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ. 2014 ಕ್ಕೆ ಮೊದಲು ಇದ್ದ ವೈದ್ಯಕೀಯ ಕಾಲೇಜುಗಳ ಸಂಖ್ಯೆ 387. ಪ್ರಸ್ತುತ 654 ವೈದ್ಯ ಕಾಲೇಜುಗಳಿದ್ದು ಶೇ 69 ರಷ್ಟು ಹೆಚ್ಚಾಗಿವೆ ಎಂದು ಆರೋಗ್ಯ ಇಲಾಖೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಫೆಬ್ರವರಿಯಲ್ಲಿ ರಾಜ್ಯಸಭೆಗೆ ತಿಳಿಸಿದ್ದರು.
2014 ರ ಮೊದಲು ಎಂಬಿಬಿಎಸ್ ಸೀಟುಗಳಲ್ಲಿ 51,348 ರಿಂದ 99,763 ಅಂದರೆ ಶೇ 94 ರಷ್ಟು ಏರಿಕೆಯಾಗಿದೆ. 2014 ಕ್ಕಿಂತ ಮೊದಲು 31,185 ರಿಂದ ಈಗಿನಂತೆ 64,559ಕ್ಕೆ ಪಿಜಿ ಸೀಟುಗಳಲ್ಲಿ ಶೇಕಡಾ 107 ರಷ್ಟು ಹೆಚ್ಚಳವಾಗಿದೆ. ದೇಶದಲ್ಲಿ ವೈದ್ಯರ ಸಂಖ್ಯೆ ಹೆಚ್ಚಿಸಲು ಸರ್ಕಾರವು ವೈದ್ಯ ಕಾಲೇಜುಗಳನ್ನು ದ್ವಿಗುಣಗೊಳಿಸಿದೆ. ಎಂಬಿಬಿಎಸ್ ಸೀಟುಗಳ ಸಂಖ್ಯೆಯೂ ಏರಿಕೆಯಾಗಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಿದ್ದರು.
ದೇಶದಲ್ಲಿ ವೈದ್ಯ ಸೀಟುಗಳನ್ನು ಹೆಚ್ಚಿಸಲು ಸರ್ಕಾರವು ಜಿಲ್ಲಾ / ರೆಫರಲ್ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಕೇಂದ್ರ ಪ್ರಾಯೋಜಿತ ಯೋಜನೆ ಜಾರಿ ಮಾಡಿದೆ. ಅದರಡಿ 157 ಅನುಮೋದಿತ ವೈದ್ಯಕೀಯ ಕಾಲೇಜುಗಳಲ್ಲಿ 94 ಹೊಸ ವೈದ್ಯಕೀಯ ಕಾಲೇಜುಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.
ವೈದ್ಯಕೀಯ ಕಾಲೇಜುಗಳ ಮಾನ್ಯತೆ ರದ್ದತಿ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯಕೀಯ ಕ್ಷೇತ್ರದ ತಜ್ಞರು, ಎನ್‌ಎಂಸಿ ಆಧಾರ್-ಸಕ್ರಿಯಗೊಳಿಸಿದ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಅವಲಂಬಿಸಿದೆ. ಇದರಿಂದಾಗಿ ಹಗಲು ವೇಳೆಯಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಕರ್ತವ್ಯದಲ್ಲಿರುವ ಅಧ್ಯಾಪಕರನ್ನು ಮಾತ್ರ ಪರಿಗಣಿಸುತ್ತದೆ. ವೈದ್ಯರ ಕೆಲಸದ ಸಮಯವನ್ನು ನಿಗದಿಪಡಿಸಲಾಗಿಲ್ಲ. ಅವರು ತುರ್ತು ಮತ್ತು ರಾತ್ರಿ ಪಾಳಿಯಲ್ಲಿಯೂ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಕೆಲಸದ ಸಮಯದೊಂದಿಗಿನ ಎನ್‌ಎಂಸಿ ಬಿಗಿತವು ಈ ಸಮಸ್ಯೆ ಸೃಷ್ಟಿಸಿದೆ. ವೈದ್ಯಕೀಯ ಕಾಲೇಜುಗಳ ಶಿಸ್ತುಬದ್ದ ಹಾಗೂ ಸೂಕ್ಷ್ಮ ನಿರ್ವಹಣೆಗೆ ಎನ್‌ಎಂಸಿ ಅಗತ್ಯವಿದೆ ಎಂದು ಹೇಳಿದ್ದಾರೆ.
ಇನ್ನೊಬ್ಬ ತಜ್ಞ ಪ್ರತಿಕ್ರಿಯಿಸಿ, ಎನ್‌ಎಂಸಿ ನ್ಯೂನತೆ ಅಧಾರದಲ್ಲಿ ವೈದ್ಯಕೀಯ ಕಾಲೇಜುಗಳ ಮಾನ್ಯತೆ ರದ್ದುಗೊಳಿಸುತ್ತಿದೆ. ಇದೇ ಸಮಯದಲ್ಲಿ ಎನ್‌ಎಂಸಿ ಅಂತಹ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನೋಂದಣಿಗೆ ಅವಕಾಶ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಇಂತಹ ಪ್ರಯೋಗವು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದೆ. ಏಕೆಂದರೆ ಭಾರತವು ವೈದ್ಯರ ಅತಿದೊಡ್ಡ ಪೂರೈಕೆದಾರ ರಾಷ್ಟ್ರವಾಗಿದ್ದು, ಅಂತಹ ನಿದರ್ಶನಗಳು ಬೆಳಕಿಗೆ ಬಂದಲ್ಲಿ ವಿಶ್ವವು ಭಾರತೀಯ ವೈದ್ಯರ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತದೆ ಎಂದರು.
ಇದನ್ನೂಓದಿ: ಬೆಂಗಳೂರಿನಲ್ಲಿಂದು ವರುಣನ ಆರ್ಭಟ: ಇನ್ನೆರೆಡು ದಿನ ಗುಡುಗು ಸಹಿತ ಮಳೆ ಸಾಧ್ಯತೆ