ಗ್ವಾಲಿಯರ್: ಕೊರೊನಾ ಮೂರನೇ ಅಲೆ ಆತಂಕ ಈಗಾಗಲೇ ಮನೆ ಮಾಡಿದ್ದು ಗ್ವಾಲಿಯರ್ನಲ್ಲಿ ಒಟ್ಟು ನಾಲ್ಕು ಮಕ್ಕಳಿಗೆ ಕೊರೊನಾ ಪಾಸಿಟವ್ ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಕೋವಿಡ್-19 ಮೂರನೇ ಅಲೆ ಹೆಚ್ಚು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಈಗಾಗಲೇ ಕೆಲ ವರದಿಗಳು ಮಾಹಿತಿ ನೀಡಿವೆ. ಗ್ವಾಲಿಯರ್‌ನ ಭಿತಾರ್ವಾರ್ ಬ್ಲಾಕ್‌ನ ರಾಯ್ ಗ್ರಾಮದ 14 ತಿಂಗಳ ಬಾಲಕಿಯೊಬ್ಬಳಗೆ ಮತ್ತು ಮಾಕ್ರೈಯಾ ಗ್ರಾಮದ 8 ತಿಂಗಳ ಬಾಲಕಿ, ಮೊಹನ್‌ಗಢ್ ಗ್ರಾಮದ 6 ತಿಂಗಳ ಮಗುವಿಗೆ ಮತ್ತು ನಗರದ ಹಜೀರಾ ಮೂಲದ 16 ವರ್ಷದ ಬಾಲಕನೊಬ್ಬನಿಗೆ ಕೊರೊನಾ ಸೋಂಕು ತಗುಲಿದೆ.
ಸೋಂಕಿತ ಮಕ್ಕಳ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಿ, ಕೊರೊನಾ ಟೆಸ್ಟ್ ಮಾಡಿಸಲಾಗುತ್ತಿದೆ. ಈಗಾಗಲೇ ಇಬ್ಬರು ಸೋಂಕಿತ ಮಕ್ಕಳು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕೋವಿಡ್ ಎರಡನೇ ಅಲೆ ಮೊದಲ ಅಲೆಗಿಂತ ಹೆಚ್ಚಾಗಿಯೇ ಪರಿಣಾಮ ಬೀರಿತ್ತು. ಆಕ್ಸಿಜನ್, ಬೆಡ್, ಔಷಧ ಕೊರತೆ ಎದುರಿಸಬೇಕಾಯಿತು. ಈ ಎಡವಟ್ಟಿನಿಂದ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಮೂರನೇ ಅಲೆ ಪ್ರಾರಂಭವಾಗುವ ಮುನ್ನವೇ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಈ ಬೆನ್ನಲ್ಲೇ ಇದೀಗ ಮಕ್ಕಳಲ್ಲಿ ಸೋಂಕು ಕಂಡುಬರುತ್ತಿದ್ದು, ಆತಂಕ ಮನೆ ಮಾಡುವಂತೆ ಮಾಡಿದೆ.
1.5 ದಶಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ತಗುಲಿದ ಸೋಂಕು:
21 ದೇಶಗಳಲ್ಲಿ 1.5 ದಶಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು ತಗಲಿದೆ. ಕಳೆದ 14 ತಿಂಗಳಲ್ಲಿ ಭಾರತದಲ್ಲಿ 1,19,000 ಮಕ್ಕಳಿಗೆ ಕೋವಿಡ್-19 ದೃಢಪಟ್ಟಿತ್ತು ಎಂದು ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಲಾಗಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡ್ರಗ್ ಅಬ್ಯೂಸ್ ನಡೆಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ 25,500 ಮಕ್ಕಳು ತಮ್ಮ ತಾಯಿಯನ್ನು ಕೋವಿಡ್ -19 ರಿಂದ ಕಳೆದುಕೊಂಡರೆ, 90,751 ಮಂದಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. 12 ಮಂದಿ ತಂದೆ - ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ ಎಂದು ತಿಳಿಸಲಾಗಿದೆ.