ಮುಂಬೈ(ಮಹಾರಾಷ್ಟ್ರ): ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಕೋವಿಡ್ನ ಹೊಸ ರೂಪಾಂತರ ಒಮಿಕ್ರಾನ್ ಈಗಾಗಲೇ ಭಾರತದಲ್ಲಿ ಕಾಣಿಸಿಕೊಂಡಿದೆ. ಇದೇ ವಿಚಾರವಾಗಿ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಮಾತನಾಡಿದ್ದು, ಹೊಸ ಸೋಂಕಿನ ಮೂಲಕವೇ ಭಾರತದಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಕೊರೊನಾದ ಎರಡೂ ಅಲೆಯಲ್ಲಿ ಜನರು ತೊಂದರೆ ಅನುಭವಿಸಿರುವ ಕಾರಣ ಒಮಿಕ್ರಾನ್ ಸೋಂಕಿನ ಬಗ್ಗೆ ಭಯ ಪಡುವುದು ಸಹಜವಾಗಿದೆ. ಇದೇ ಕಾರಣದಿಂದಾಗಿ ಸೋಂಕಿನ ಭೀತಿ ಶುರುವಾಗಿದೆ. ಆದರೆ, ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದ್ದು, ಒಂದು ವೇಳೆ ಅಸಡ್ಡೆ ತೋರಿಸಿದ್ರೆ ಒಮಿಕ್ರಾನ್ ಮೂಲಕವೇ ಮೂರನೇ ಅಲೆ ದೇಶದಲ್ಲಿ ಲಗ್ಗೆ ಇಡಬಹುದು ಎಂದಿದ್ದಾರೆ.
ರಾಜ್ಯದ ಜನರು ಮಾಸ್ಕ್ ಧರಿಸುವುದು ಹಾಗೂ ಲಸಿಕೆ ಹಾಕಿಕೊಳ್ಳುವುದು ಕಡ್ಡಾಯವಾಗಿದ್ದು, ವಿಮಾನ ನಿಲ್ದಾಣದಲ್ಲಿ ಎಲ್ಲ ರೀತಿಯ ನಿರ್ಬಂಧ ವಿಧಿಸಲಾಗಿದೆ ಎಂಬ ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿರಿ: ಶೂಟಿಂಗ್ ಸ್ಥಳದಲ್ಲಿ ಬೈಕ್ ಡಿಕ್ಕಿ: ಗಾಯಗೊಂಡ ಬೆಂಗಾಲಿ ನಟಿ ಪ್ರಿಯಾಂಕಾ
ರಾಜ್ಯದಲ್ಲಿ ಯಾವುದೇ ರೀತಿಯ ನಿರ್ಬಂಧ ಅಥವಾ ಲಾಕ್ಡೌನ್ ಹೇರುವ ಯೋಚನೆ ನಮ್ಮ ಮುಂದೆ ಇಲ್ಲ. ಆದರೆ, 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಕೇಂದ್ರದ ಮೇಲೆ ಒತ್ತಾಯ ಹೇರಿದ್ದೇವೆ ಎಂದರು. ರಾಜ್ಯದಲ್ಲಿ ಮೂರನೇ ಅಲೆ ತಡೆಗಟ್ಟಲು ಅಗತ್ಯವಾದ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈಗಾಗಲೇ ಸಭೆ ನಡೆಸಿದ್ದು, ಮಹತ್ವದ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದರು.