ಅಮೃತ್‌ಸರ (ಪಂಜಾಬ್): ಸಿಖ್ಖರ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಅಮೃತ್‌ಸರದ ಸ್ವರ್ಣ ಮಂದಿರದ ಬಳಿ ಕಳೆದ ರಾತ್ರಿ ಸ್ಫೋಟ ಸಂಭವಿಸಿದೆ. ಶ್ರೀ ಹರ್ಮಿಂದರ್ ಸಾಹಿಬ್ ಸಮೀಪ ಘಟನೆ ಜರುಗಿದೆ. ಶ್ರೀ ಗುರು ರಾಮದಾಸ್ ನಿವಾಸ ಮತ್ತು ಲಂಗರ್ ಹಾಲ್ ಬಳಿ ದೊಡ್ಡ ಶಬ್ದ ಕೇಳಿಬಂದಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಇದು ಮೂರನೇ ಸ್ಫೋಟ: ಪೊಲೀಸ್ ಆಯುಕ್ತ ನೌನಿಹಾಲ್ ಸಿಂಗ್ ಸುದ್ದಿಗಾರೊಂದಿಗೆ ಮಾತನಾಡಿ, "ಮಧ್ಯರಾತ್ರಿ 12:15 ರಿಂದ 12:30 ರ ಸುಮಾರಿಗೆ ಘಟನೆ ನಡೆದಿದೆ. ಇದು ಮತ್ತೊಂದು ಸ್ಫೋಟವಾಗಿರುವ ಸಾಧ್ಯತೆ ಇದೆ. ಕಟ್ಟಡದ ಹಿಂಭಾಗದಲ್ಲಿ ಕೆಲವು ವಸ್ತಗಳನ್ನು ಪತ್ತೆ ಹಚ್ಚಿದ್ದೇವೆ. ಕತ್ತಲು ಇದ್ದುದರಿಂದ ಶೋಧ ಸಾಧ್ಯವಾಗುತ್ತಿಲ್ಲ. ಎಲ್ಲ ವಸ್ತುಗಳನ್ನು ಪತ್ತೆ ಮಾಡಿದ ಬಳಿಕ ಘಟನೆಗೆ ಕಾರಣ ತಿಳಿಯಲಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ" ಎಂದು ಮಾಹಿತಿ ನೀಡಿದರು.
ಐವರ ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಓರ್ವ ಯುವಕ ಮತ್ತು ಯುವತಿ ಇದರಲ್ಲಿದ್ದಾರೆ. ಮೂಲಗಳ ಪ್ರಕಾರ, ವಶಕ್ಕೆ ಪಡೆದವರ ಬಳಿ ಪತ್ರವೊಂದು ಸಿಕ್ಕಿದೆ. ಪತ್ರದಲ್ಲಿ ಏನಿದೆ ಮತ್ತು ಸ್ಫೋಟಕ್ಕೂ ಇದಕ್ಕೂ ಸಂಬಂಧವಿದೆಯೇ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಈ ಹಿಂದಿನ 2 ಸ್ಫೋಟಗಳು: ಇದೇ ಪ್ರದೇಶದಲ್ಲಿ ಮೇ 6 ರಂದು ಶನಿವಾರ ಮೊದಲ ಸ್ಫೋಟ ಸಂಭವಿಸಿತ್ತು. ಇದಾದ ನಂತರ ಎರಡನೇ ಸ್ಫೋಟ ಮೇ 8 ರಂದು ಸೋಮವಾರ ನಡೆದಿದೆ. ಎರಡನೇ ಸ್ಫೋಟದ ನಂತರ, ಎನ್‌ಐಎ ಮತ್ತು ಎನ್‌ಎಸ್‌ಜಿ ತಂಡಗಳು ತನಿಖೆಗೆ ಆಗಮಿಸಿದ್ದವು. ಇದಾಗಿ 30 ಗಂಟೆಗಳ ಅಂತರದಲ್ಲಿಯೇ ಮೂರನೇ ಘಟನೆ ಸಂಭವಿಸಿದೆ. ಯಾತ್ರಾರ್ಥಿಗಳು ಆತಂಕಗೊಂಡಿದ್ದಾರೆ.
ಇದನ್ನೂ ಓದಿ: ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ಮುರಿದುಬಿದ್ದ ಗ್ಲಾಸ್ ಕನ್ನಡಿ, ಕೆಲವರಿಗೆ ಗಾಯ