ಆಂಧ್ರಪ್ರದೇಶ : ಡಿಸೆಂಬರ್ 31ರ ಮಧ್ಯರಾತ್ರಿ ಅನಂತಪುರ ಜಿಲ್ಲೆಯ ಕೊಡಿಜೆನಹಳ್ಳಿ ಗ್ರಾಮದಲ್ಲಿರುವ ಇಂಡಿಯನ್ ಬ್ಯಾಂಕ್ ಎಟಿಎಂಯಲ್ಲಿ ಅಪರಿಚಿತ ವ್ಯಕ್ತಿಗಳು ಹಣ ದೋಚಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಗುರುವಾರ ಬೆಳಗ್ಗೆ ಕೊಡಿಜೆನಹಳ್ಳಿ ಗ್ರಾಮದಲ್ಲಿರುವ ಇಂಡಿಯನ್ ಬ್ಯಾಂಕ್ ಎಟಿಎಂನಲ್ಲಿ 9 ಲಕ್ಷ ರೂ. ನಗದು ಇತ್ತು. ಈ ಪೈಕಿ ಗ್ರಾಹಕರು ಮಧ್ಯಾಹ್ನದವರೆಗೆ 3 ಲಕ್ಷ ರೂ. ಡ್ರಾ ಮಾಡಿದ್ದರು.
ಅದೇ ದಿನ ಮಧ್ಯರಾತ್ರಿ 22,000 ರೂ. ಡ್ರಾ ಮಾಡಲಾಗಿದೆ ಎಂಬ ಮಾಹಿತಿ ಬ್ಯಾಂಕ್ ಅಧಿಕಾರಿಗಳಿಗೆ ಸಿಕ್ಕಿದೆ. ಉಳಿದ 5.80 ಲಕ್ಷ ರೂ. ಹಣ ದೋಚುವಲ್ಲಿ ಖದೀಮರು ವಿಫಲರಾಗಿದ್ದಾರೆ. ಬಳಿಕ ಎಟಿಎಂ ಯಂತ್ರಕ್ಕೆ ಬೆಂಕಿ ಹಚ್ಚಿದ್ದು, ಇದರಿಂದಾಗಿ 5.80 ಲಕ್ಷ ರೂ. ಸುಟ್ಟು ಕರಕಲಾಗಿದೆ.
ಜನವರಿ 1ರ ಬೆಳಗ್ಗೆ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕಿರಾತಕರ ದುಷ್ಕ್ರತ್ಯ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ವಿಶೇಷ ತಂಡ ರಚಿಸಿ, ಆರೋಪಿಗಳಿಗಾಗಿ ಹಿಂದೂಪುರಂ ಪಟ್ಟಣದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಈ ಮಧ್ಯೆ ಶಂಕಿತ ಆರೋಪಿ ಮನೋಜ್ ಕುಮಾರ್ (21) ಅಬದ್ಪೇಟ್ನಲ್ಲಿರುವ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಹಿಂದೂಪುರ ಬಳಿಯ ಕಾರ್ಖಾನೆಯೊಂದರಲ್ಲಿ ಕೂಲಿ ಕಾರ್ಮಿಕನಾಗಿದ್ದ. ಕಳ್ಳತನಕ್ಕೆ ಯತ್ನಿಸಿದ ಇನ್ನೋರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.